ಗದಗ: ನಮ್ಮ ದೇಶದ ಅನ್ನ ಉಂಡು ನಮ್ಮ ವೈರಿ ಪಾಕಿಸ್ತಾನದ ಬಗ್ಗೆ ಘೋಷಣೆ ಹಾಕಿದ್ದು ತಪ್ಪು ಎಂದು ಅಮೂಲ್ಯ ಲಿಯೋನ್ ದೇಶ ದ್ರೋಹ ಹೇಳಿಕೆ ಪ್ರಕರಣ ಸಂಬಂಧ ಡಿಸಿಎಂ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂತಹ ತಪ್ಪನ್ನು ಯಾರೂ ಮಾಡಬಾರದು. ತಿಳುವಳಿಕೆ ಇಲ್ಲದ ಹುಡುಗಿಯಿಂದ ಇಂತಹ ಘಟನೆ ಆಗಿರಬಹುದು. ಇಂತಹ ತಪ್ಪು ಯಾರೇ ಮಾಡಿದ್ರೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾವು ಭಾರತೀಯರೆಂಬ ಹೆಮ್ಮೆಯಿಂದ ಬದುಕಬೇಕು. ದೇಶ ದ್ರೋಹದ ಚಟುವಟಿಕೆಗಳನ್ನು ಸರ್ಕಾರ ಸಹಿಸಲ್ಲ. ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳತ್ತೇವೆ ಎಂದರು.
ಅಮೂಲ್ಯ ಪ್ರಕರಣ ಕುರಿತು ಡಿಸಿಎಂ ಕಾರಜೋಳ ಪ್ರತಿಕ್ರಿಯೆ ಇನ್ನು ಮಹದಾಯಿ ವಿಚಾರದಲ್ಲಿ ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಇದು ರಾಜ್ಯಕ್ಕೆ ಸಿಕ್ಕ ಜಯ ಅಂತ ವ್ಯಾಖ್ಯಾನಿಸಿದ್ರು. ಮಹದಾಯಿ, ಕಳಸಾ ಬಂಡೂರಿ ನಮ್ಮ ಭಾಗದ ಬಹುದಿನದ ಜನರ ಹೋರಾಟವಾಗಿತ್ತು. ಟ್ರಿಬ್ಯುನಲ್ನಲ್ಲಿ ನಮಗೆ ಗೆಲುವು ಆಗಿದ್ರೂ ಕೂಡಾ, ಗೋವಾ, ಮಹಾರಾಷ್ಟ್ರ, ರಾಜ್ಯದವರು ನಮಗೆ ಅನ್ಯಾಯವಾಗಿದೆ ಅಂತಾ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ರು ಮತ್ತು ಟ್ರಿಬ್ಯುನಲ್ ನೀಡಿದ್ದ ಆದೇಶದ ಕುರಿತ ಗೆಜೆಟ್ ನೋಟಿಫಿಕೇಷನ್ ಲೇಟ್ ಆಗಿತ್ತು. ಆದ್ರೆ, ನಿನ್ನೆ ಸುಪ್ರೀಂಕೋರ್ಟ್ ಟ್ರಿಬ್ಯುನಲ್ ಆದೇಶದಂತೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಆದೇಶಿಸಿದೆ. ಈ ಆದೇಶವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ಕೋರ್ಟ್ನ ಕೊನೆಯ ತೀರ್ಪಿನಲ್ಲಿ ವ್ಯತ್ಯಾಸವಾದ್ರೆ, ಮತ್ತೆ ನೋಟಿಫಿಕೇಷನ್ ಹಾಕಬೇಕಾಗುತ್ತದೆ. ಈಗ ಪ್ರಥಮ ಹಂತದಲ್ಲಿ ಜಯ ಸಿಕ್ಕಿದೆ, ಬಂದಂತಹ ನೀರನ್ನು ಕುಡಿಯುವುದಕ್ಕೆ, ರೈತರಿಗೆ ನೀರಾವರಿ ಬಳಸಿಕೊಳ್ಳೋಕೆ ಯೋಜನೆ ರೂಪಿಸಿಕೊಳ್ಳುವುದಕ್ಕೆ ನಮ್ಮ ಸರ್ಕಾರ ಬದ್ದವಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪಾಲಿಸಬೇಕು ಅಂತ ಹೇಳಿದ್ರು.