ಗದಗ:ಸತತ ಎರಡು ವಾರಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಇರುವ ಹಳ್ಳಕೊಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಅದರಲ್ಲೂ ತುಂಗಭದ್ರಾ ನದಿ ಪ್ರವಾಹದ ರೀತಿಯಲ್ಲಿ ಭೋರ್ಗರೆಯುತ್ತಿದೆ. ಆದರೂ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ಬಳಿ ಮೀನು ಹಿಡಿಯುವ ಹುಚ್ಚಾಟ ಹೆಚ್ಚಾಗಿದೆ. ಅಪಾಯಮಟ್ಟದಲ್ಲಿ ರಭಸವಾಗಿ ಹರಿಯುವ ನದಿಯಲ್ಲಿಯೇ ತೆಪ್ಪದಲ್ಲಿ ಹೋಗಿ ಮೀನು ಹಿಡಿಯುವ ದುಸ್ಸಾಹಸ ಮಾಡುತ್ತಿದ್ದಾರೆ.
ಹಮ್ಮಗಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳ ಜನರು ಈ ಬ್ಯಾರೇಜ್ನಿಂದ ಮೀನು ಹಿಡಿದು ಜೀವನ ಸಾಗಿಸುತ್ತಾರೆ. ಆದರೆ ಈಗ ತುಂಗಭದ್ರಾ ನದಿ ಎರಡು ದಂಡೆಯ ಸೋಸಿ ರಭಸವಾಗಿ ಹರಿಯುತ್ತಿರುವುದರಿಂದ ಮೀನು ಹಿಡಿಯಲು ಅನುಕೂಲರವಾಗಿಲ್ಲ. ಒಂದು ವೇಳೆ ಮೀನು ಹಿಡಿಯಲು ಬಳಸುವ ತೆಪ್ಪ ನೀರಿನ ರಭಸಕ್ಕೆ ಪಲ್ಟಿ ಹೊಡೆದರೆ ಅಥವಾ ಸೆಳವಿಗೆ ಕೊಚ್ಚಿಕೊಂಡು ಹೋದಲ್ಲಿ ಜೀವಕ್ಕೆ ಕುತ್ತು ಬರೋ ಸಾಧ್ಯತೆ ಹೆಚ್ಚಿದೆ.