ಗದಗ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಮಾದರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಕೆ.ಹೆಚ್.ಪಾಟೀಲ್ ಕ್ರಿಕೆಟ್ ಲೀಗ್ಗೆ ಚಾಲನೆ ನೀಡಲು ಭಾರತ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ ಆಗಮಿಸಿದ್ದರು. ಶನಿವಾರ ಸಂಜೆ ನಗರದ ವಿಡಿಎಸ್ ಮೈದಾನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಹಾನೆ, ಬಲೂನು ಹಾರಿ ಬಿಡುವ ಮೂಲಕ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ಕೊಟ್ಟರು.
ಉದ್ಘಾಟನೆ ಬಳಿಕ ಮಾತನಾಡಿದ ಅವರು, "ಕ್ರಿಕೆಟ್ ಒಂದು ಅತ್ಯುತ್ತಮ ಆಟವಾಗಿದ್ದು, ಯುವಕರು ತಮ್ಮಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯ ತೋರ್ಪಡಿಸುವ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು. ಗದಗ ನಗರಕ್ಕೆ ಆಗಮಿಸಿರುವುದು ಬಹಳ ಸಂತಸ ತಂದಿದೆ. ಇಲ್ಲಿಯೂ ಸಾಕಷ್ಟು ಪ್ರತಿಭೆಗಳಿದ್ದು, ಶಾಸಕ ಹೆಚ್.ಕೆ.ಪಾಟೀಲ್ ಅವರು ಆಟಗಾರರಿಗೆ ಉತ್ತಮ ವೇದಿಕೆ ಒದಗಿಸಿಕೊಟ್ಟಿದ್ದಾರೆ. ಅದನ್ನು ಎಲ್ಲರೂ ಸದುಪಯೋಗ ಮಾಡಿಕೊಳ್ಳಬೇಕು" ಎಂದು ಸಲಹೆ ನೀಡಿದರು.
"ನಾನು ಕ್ರಿಕೆಟ್ನಿಂದ ಸಾಕಷ್ಟು ಕಲಿತಿರುವೆ. ಈಗಲೂ ಹೊಸದನ್ನು ಕಲಿಯುತ್ತಲೇ ಇದ್ದೇನೆ. ನಮ್ಮ ಹಿಂದಿನ ದಿನಮಾನಗಳನ್ನು ನಾವು ಯಾವತ್ತೂ ಮರೆಯಬಾರದು. ನಾವು ಎಲ್ಲಿಂದ ಬಂದಿದ್ದೇವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಾನು ಈ ಮಟ್ಟಕ್ಕೆ ಬರಲು ಮುಖ್ಯ ಕಾರಣ ಕ್ರಿಕೆಟ್" ಎನ್ನುತ್ತ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ತುಂಬಿದರು.
ಶಾಸಕ ಹೆಚ್.ಕೆ.ಪಾಟೀಲ್ ಮಾತನಾಡಿ, "ಯುವ ಪ್ರತಿಭೆಗಳಿಗೆ ಇದೊಂದು ಉತ್ತಮ ಅವಕಾಶ. ನಗರದಲ್ಲಿ ಇಂತಹದೊಂದು ಅವಕಾಶ ಮಾಡಿಕೊಟ್ಟಿದ್ದು, ಅದನ್ನು ಬಳಸಿಕೊಳ್ಳಬೇಕು. ಯುವ ಆಟಗಾರರನ್ನು ಕಂಡುಕೊಳ್ಳುವುದು ಈ ಕ್ರಿಕೆಟ್ ಲೀಗ್ನ ಪ್ರಮುಖ ಉದ್ದೇಶ. ನಮ್ಮ ಗದಗದಲ್ಲಿರುವ ಪ್ರತಿಭಾನ್ವಿತ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವಂತಾಗಬೇಕು" ಎಂದು ಹಾರೈಸಿದರು.