ಗದಗ:ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಕುಟುಂಬವೊಂದರ ಬಡತನದ ದುಸ್ಥಿತಿ ಅನಾವರಣವಾಗಿದೆ.
ಹೌದು, ಕೊರೊನಾ ವಾರಿಯರ್ ಪತ್ನಿ ತನ್ನ ತಾಳಿಯನ್ನೇ ಅಡವಿಟ್ಟು ತನ್ನ ಪತಿಯ ಶ್ರಾದ್ಧ ಕಾರ್ಯವನ್ನು ಪೂರೈಸಿರುವ ಮನುಕಲುಕುವ ಘಟನೆ ಜಿಲ್ಲೆಯ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ತಾಳಿ ಅಡವಿಡೋ ಮೂಲಕ ಗಂಡನ ಶ್ರಾದ್ಧ ಕಾರ್ಯ ಮಾಡಿದ ಮಹಿಳೆ ಕಳೆದ ಮೇ 27 ರಂದು ಆ್ಯಂಬುಲೆನ್ಸ್ ಚಾಲಕ ಉಮೇಶ್ ಹಡಗಲಿ ಎಂಬುವರು ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ ಮೃತಪಟ್ಟು 5 ದಿನ ಕಳೆದರೂ ಸಹ ಜಿಲ್ಲಾಡಳಿತವಾಗಲಿ ಅಥವಾ ಆರೋಗ್ಯ ಇಲಾಖೆಯಾಗಲಿ ಇವರ ಕುಟುಂಬದ ನೆರವಿಗೆ ಬಂದಿಲ್ಲ ಎನ್ನಲಾಗ್ತಿದೆ.
ಜಿಲ್ಲಾಡಳಿತದ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿಗಳು ಸಹ ಈ ಕುಟುಂಬಕ್ಕೆ ಕನಿಷ್ಠ ಸಾಂತ್ವನ ಕೂಡ ಹೇಳಿಲ್ಲ. ಇತ್ತ ಡಿಹೆಚ್ಓ ಸಹ ಈ ಪ್ರಕರಣ ತಮ್ಮ ವ್ಯಾಪ್ತಿಗೆ ಬರಲ್ಲ ಎಂದು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಎರಡು ಮಕ್ಕಳು ಮತ್ತು ಪತ್ನಿಯನ್ನು ಆ್ಯಂಬುಲೆನ್ಸ್ ಚಾಲಕ ಉಮೇಶ್ ಅಗಲಿದ್ದಾರೆ. ಸದ್ಯ ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಗಂಡನ ಅಗಲಿಕೆಯಿಂದಾಗಿ ದಿಕ್ಕು ತೋಚದಂತಾಗಿ ಕುಳಿತಿದ್ದಾರೆ. ಬಡತನದಲ್ಲಿರುವ ಈ ಕುಟುಂಬಕ್ಕೆ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಇವರತ್ತ ಕಣ್ತೆರೆದು ನೋಡಬೇಕಿದೆ.