ಕರ್ನಾಟಕ

karnataka

ETV Bharat / state

ಕಂಪನಿ ಕೆಲಸ ಕಿತ್ತುಕೊಂಡ ಕೊರೊನಾ... ಊರಿಗೆ ಬಂದು ಕೈಗೆ ಗುದ್ದಲಿ, ಸಲಿಕೆ ಹಿಡಿದ ಇಂಜಿನಿಯರ್...! - Engineer working as MNREGA labour

ಕೊರೊನಾ ಸಂಕಷ್ಟದಿಂದ ಜನರು ತತ್ತರಿಸಿ ಹೋಗಿದ್ದು, ಹೊಟ್ಟೆ ಪಾಡಿಗಾಗಿ ಪರದಾಡುವಂತಾಗಿದೆ. ಅನೇಕರು ತಾವು ಮಾಡುತ್ತಿದ್ದ ಕೆಲಸ ಬಿಟ್ಟು, ಊರಿಗೆ ಬಂದು ಕೂಲಿ ಮಾಡುತ್ತಿದ್ದಾರೆ. ಗದಗಿನಲ್ಲಿಯೂ ಕೂಡ ಒಬ್ಬ ಇಂಜಿನಿಯರ್, ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.

corona effect on engineer in gadag
ಕಂಪನಿ ಕೆಲಸ ಬಿಟ್ಟು ಊರಲ್ಲಿ ಕೂಲಿ ಮಾಡ್ತಿರುವ ಇಂಜಿನಿಯರ್

By

Published : May 31, 2020, 6:05 PM IST

ಗದಗ: ಕೊರೊನಾದಿಂದ ಬದುಕಿದರೆ ಸಾಕು ಎಂದು ಅನೇಕರು ಹುಟ್ಟಿದ ಊರಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಇನ್ನೂ ಕೆಲವರು ತಾವು ಮಾಡುತ್ತಿದ್ದ ದೊಡ್ಡ ದೊಡ್ಡ ಕಂಪನಿ ಕೆಲಸಗಳಿಂದ ಹೊರಬಿದ್ದು ಮುಂದೇನು ಎಂದು ಚಿಂತೆ ಮಾಡುತ್ತಿದ್ದಾರೆ. ಆದರೆ ಜಿಲ್ಲೆಯ ಯುವಕನೊಬ್ಬ ತನ್ನ ನಡೆಯಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ.

ಹೌದು, ಕೊರೊನಾ ಹೊಡೆತಕ್ಕೆ ಸಿಲುಕಿ ಕೆಲಸ ಮಾಡುತ್ತಿದ್ದ ಕಂಪನಿಯೇ ಬಾಗಿಲು ಹಾಕಿತು. ಇದ್ದ ಉದ್ಯೋಗವೂ ಹೋಯಿತು. ಇಂಜಿನಿಯರ್ ಆಗಿದ್ದ ಯುವಕನಿಗೆ ಊರಿನ ದಾರಿ ಕಾಣಿಸಿತು. ಕೆಲಸ ಹೋಯಿತೆಂದು ಚಿಂತೆಗೀಡಾಗದ ಈ ಯುವಕ ತನ್ನೂರಿಗೆ ಬಂದು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಕೂಲಿ ಕೆಲಸ ಮಾಡ್ತಿದ್ದಾರೆ.

ಕಂಪನಿ ಕೆಲಸ ಬಿಟ್ಟು ಊರಲ್ಲಿ ಕೂಲಿ ಮಾಡ್ತಿರುವ ಇಂಜಿನಿಯರ್

ಕಲಿತ ವಿದ್ಯಾರ್ಹತೆ ತಕ್ಕಂತೆ ಸ್ವಂತ ಊರಿನಲ್ಲಿ ಕೆಲಸ ಸಿಗ್ತಿಲ್ಲ. ಸಿಕ್ಕರೂ ಸಂಬಳ ತೀರಾ ಕಡಿಮೆ. ಹೀಗಾಗಿ ಪದವಿಗೆ ತಕ್ಕ ಕೆಲಸವನ್ನು ಹುಡುಕುವುದೇ ಬೇಡ ಎಂದು, ಯುವ ಇಂಜಿನಿಯರ್ ಒಬ್ರು ಕೈಯಲ್ಲಿ ಗುದ್ದಲಿ, ಸಲಿಕೆ‌ ಹಿಡಿದಿದ್ದಾರೆ. ಎ.ಸಿ‌ ಕೆಳಗೆ ಕುಳಿತು ಕಂಪ್ಯೂಟರ್ ನೋಡ್ತಿದ್ದ ಯುವಕ, ಕೊರೊನಾ ಎಫೆಕ್ಟ್​​​ನಿಂದ ಉರಿಬಿಸಿಲ‌ ಝಳಕ್ಕೆ ನೆತ್ತಿ ಒಡ್ಡಿ ಹೊಟ್ಟೆಗೆ ಬುತ್ತಿ ಕಂಡುಕೊಳ್ತಿದ್ದಾರೆ.

ಗದಗ ತಾಲೂಕಿನ ಕದಡಿ ಗ್ರಾಮದ ಸದಾನಂದ‌ ಮುಕ್ಕನ್ನವರ ಎಂಬ ಯುವಕ, ಮೂಲತಃ ರೈತ ಕುಟುಂಬದವನಾಗಿದ್ರೂ, ಕಷ್ಟಪಟ್ಟು ಬಿಇ ಇಲೆಕ್ಟ್ರಾನಿಕ್ ಪದವೀಧರನಾಗಿದ್ದಾರೆ. ‌ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ​ ಇಂಜಿನಿಯರ್​​ ಆಗಿ ಕೆಲಸ‌ ಮಾಡ್ತಿದ್ದರು. ಕೈತುಂಬಾ ಸಂಬಳವೂ ಬರುತ್ತಿತ್ತು. ಆದರೆ ಕೊರೊನಾದಿಂದಾಗಿ ಕಂಪನಿ ಬಾಗಿಲು ಹಾಕಿದೆ. ಹೀಗಾಗಿ ಊರಿಗೆ ಮರಳಿರುವ ಯುವಕ ಸದಾನಂದ ಇದೀಗ ನರೇಗಾ ಯೋಜನೆಯಡಿ ಕೂಲಿ ಮಾಡುತ್ತಿದ್ದಾರೆ.

ಎರಡು ತಿಂಗಳ ಮನೆಯಲ್ಲಿ ಕುಳಿತಿದ್ದರೂ ಕಂಪನಿಯಿಂದ ಕರೆ ಬಂದಿಲ್ಲ. ಹೀಗಾಗಿ ಗುದ್ದಲಿ ಹಿಡಿದು ಜಮೀನಿಗೆ ಕೆಲಸಕ್ಕೆ ಹೊರಟಿದ್ದಾರೆ. ತಾಯಿ‌ ಜೊತೆ ಕೂಲಿ‌ ಕಾರ್ಮಿಕರ ಹಾಗೆ ಕಂಪನಿ ಕನಸು ಬಿಟ್ಟು ಬದು ಕೆಲಸಕ್ಕೆ ನಿಂತಿದ್ದಾರೆ. ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದ ಹಿನ್ನೆಲೆ ಸಾಧ್ಯವಾದಷ್ಟು ಹೆತ್ತವರ ಭಾರ ಕಡಿಮೆ ಮಾಡೋಣ ಎಂದು, ತಾಯಿ ಹಾಗೂ ಚಿಕ್ಕಪ್ಪನ ಜೊತೆ ಜಮೀನಿನಲ್ಲಿ‌ ಕೂಲಿ ಕೆಲಸ ಮಾಡ್ತಿರುವ ಸದಾನಂದ ಅವರ ನಡೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details