ಗದಗ :ಮುಂದಿನ ಸಿಎಂ ಯಾರಾಗಬೇಕು ಅನ್ನುವ ವಿಚಾರವಾಗಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇಲ್ಲ ಎಂದು ಶಾಸಕ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಭವಿಷ್ಯದ ಸಿಎಂ ಬಗ್ಗೆ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದ ಪದ್ಧತಿ ಹಾಗೂ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ. ಮೊದಲು ಶಾಸಕಾಂಗ ಸಭೆಯಲ್ಲಿ ನಿರ್ಣಯ ಆಗಬೇಕು. ಆಮೇಲೆ ನಮ್ಮ ಹೈಕಮಾಂಡ್ ಸಿಎಂ ಯಾರಾಗುತ್ತಾರೆ ಅನ್ನೋದರ ಬಗ್ಗೆ ನಿರ್ಣಯ ಮಾಡುತ್ತದೆ. ಇಲ್ಲಿ ಹೈಕಮಾಂಡ್ ನಿರ್ಣಯವೇ ಅಂತಿಮ.
ಅದನ್ನು ನಾವೆಲ್ಲರೂ ಒಪ್ಪಿಕೊಂಡು ಬಂದಿದ್ದೇವೆ. ಇದನ್ನು ಬಿಟ್ಟು ಬೇರೆ ಯಾರೇ ಹೇಳಿದರೂ ಅದು ಪಕ್ಷದ ಸಂಸ್ಕೃತಿಗೆ ಮಾರಕ. ಸಿಎಂ ಸ್ಥಾನದ ಕುರಿತು ಯಾರು ಮಾತನಾಡಬಾರದು ಎಂದು ಹೈಕಮಾಂಡ್ ಈಗಾಗಲೇ ತಿಳಿಸಿದೆ. ಪಕ್ಷದ ಶಿಸ್ತಿನ ಅಡಿಯಲ್ಲೇ ಅಭಿಮಾನಿಗಳು ಇರಬೇಕು ಎಂದು ಮನವಿ ಮಾಡಿ ಕೊಂಡರು.
ಇನ್ನು ಶಾಸಕ ಹೆಚ್.ಕೆ.ಪಾಟೀಲ್ ಮುಂದಿನ ಸಿಎಂ ಎಂಬ ಅಭಿಮಾನಗಳ ಕ್ಯಾಂಪೇನ್ ವಿಚಾರವಾಗಿ ಪ್ರತಿಕ್ರಿಯಿಸಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ಹಾಗೂ ನಾಯಕರಿಗೆ ಸಿಎಂ ವಿಚಾರವಾಗಿ ಅಭಿಪ್ರಾಯ ವ್ಯಕ್ತಮಾಡುವ ಹಕ್ಕಿಲ್ಲ. ಮುಂದಿನ ಸಿಎಂ ಹೇಳಿಕೆಯನ್ನು ಯಾರೂ ನೀಡಕೂಡದು. ಅದು ನಮ್ಮ ಪಕ್ಷದ ಶಿಸ್ತು ಅಲ್ಲ. ಮುಖ್ಯಮಂತ್ರಿ ಪದದ ಚರ್ಚೆಗೆ ಈ ಸಂದರ್ಭದಲ್ಲಿ ಸೂಕ್ತವಲ್ಲ. ಹಾಗಾಗಿ ನಮ್ಮ ಅಭಿಪ್ರಾಯ, ಚರ್ಚೆ, ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದರು.
ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಭಾವ ಚಿತ್ರ ತೆರವು ವಿಚಾರವಾಗಿ ಒಂದು ಶಿಷ್ಟಾಚಾರದಂತೆ ಭಾವ ಚಿತ್ರ ಬಳಸಿರುತ್ತಾರೆ. ಯಾರೋ ಏನೋ ಮಾಡಿದ್ದಕ್ಕೆ ಇಂಬು ಕೊಡುವುದು ಸರಿಯಲ್ಲ. ಭಿನ್ನಾಭಿಪ್ರಾಯಗಳು, ಅಪಸ್ವರಗಳು ನಮ್ಮ ಪಕ್ಷದಲ್ಲಿ ಇಲ್ಲ ಎಂದು ಪಕ್ಷದಲ್ಲಿ ಕೇಳಿ ಬಂದ ಅಪಸ್ವರವನ್ನು ಸಮರ್ಥನೆ ಮಾಡಿಕೊಂಡರು.