ಗದಗ: ಗದಗದಲ್ಲಿ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೋರ್ವನ ಬರ್ಬರ ಹತ್ಯೆ ನಡೆದಿದೆ. ಗದಗ-ಬೆಟಗೇರಿಯ ಮಂಜುನಾಥ ನಗರದಲ್ಲಿ ಇಂದು ಸಂಜೆ ಕೊಲೆ ನಡೆದಿದೆ. ಗಜೇಂದ್ರಸಿಂಗ್ ಎಂಬಾತನಿಗೆ ಬಿಜೆಪಿ ಕಾರ್ಯಕರ್ತರು ಎನ್ನಲಾಗಿರುವ ವ್ಯಕ್ತಿಗಳು ಚಾಕು ಇರಿದು ಕೊಲೆ ಮಾಡಿದ್ದಾರೆಂದು ಮೃತನ ತಂದೆ ಕಿಶನ್ ಸಿಂಗ್ ಆರೋಪಿಸಿದ್ದಾರೆ.
ಶಿವರಾಜ್ ಪೂಜಾರ್ ಮತ್ತು ಆತನ ಸಹಚರರು ಚಾಕು ಇರಿದಿದ್ದಾರೆ ಎಂದು ಆರೋಪಿಸಿದ್ದಾರೆ. ಶಿವರಾಜ್ ಪೂಜಾರ್ ಸಹಚರನೋರ್ವ ಓರ್ವ ಮಹಿಳೆಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದನು ಎನ್ನಲಾಗಿದೆ. ಹೀಗಾಗಿ, ಗಜೇಂದ್ರಸಿಂಗ್ ಮೆಸೇಜ್ ಮಾಡದಂತೆ ಆ ಯುವಕನಿಗೆ ತಾಕೀತು ಮಾಡಿ ಬುದ್ಧಿ ಮಾತು ಹೇಳಿದ್ದಾನೆ. ಇದೇ ವಿಚಾರಕ್ಕೆ ನಿನ್ನೆ ಸಣ್ಣಗೆ ಹೊತ್ತಿಕೊಂಡಿದ್ದ ಜಗಳ ಇಂದು ಕೊಲೆಯಲ್ಲಿ ಅಂತ್ಯವಾಗಿದೆ.
ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ - ತಂದೆಯ ಆರೋಪವಿದು... ಇಂದು ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಗಜೇಂದ್ರ ಸಿಂಗ್ನಿಗೆ ರೌಡಿಶೀಟರ್ ಶಿವರಾಜ್ ಪೂಜಾರ್ ಮತ್ತು ಆತನ ಸಹಚರರು ಅಟ್ಯಾಕ್ ಮಾಡಿದ್ದಾರೆ. ಸಿಕ್ಕ ಸಿಕ್ಕಲ್ಲಿ, ಹೊಟ್ಟೆಗೆ ಚಾಕು ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಜೇಂದ್ರನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳಿದಿದ್ದಾರೆ.
ಇನ್ನು ಗಜೇಂದ್ರ ಸಿಂಗ್‌ರಿಗೆ ಚಾಕು ಇರಿದಿದ್ದಕ್ಕೆ ಆಕ್ರೋಶಗೊಂಡ ಗಜೇಂದ್ರನ ಸ್ನೇಹಿತರು ಶಿವರಾಜ್ ಪೂಜಾರ್ ಹಾಗೂ ಮಲ್ಲೇಶ್ ಕಣಕೆ ಎಂಬುವರಿಗೆ ಚಾಕು ಹಾಕಿದ್ದಾರೆ. ಸದ್ಯ ಈ ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಳಿಕ ಬೆಟಗೇರಿಯ ಮಂಜುನಾಥ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಬೀಡು ಬಿಟ್ಟಿದ್ದಾರೆ.
ಇನ್ನು ಗಜೇಂದ್ರ ಸಿಂಗ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ, ಶಿವರಾಜ್ ಪೂಜಾರ್ ಕಳೆದ ನಗರಸಭೆ ಚುನಾವಣೆಯಲ್ಲಿ 4ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ದೀಪಾ ಪೂಜಾರ್ ಪತಿಯ ಸಹೋದರನಾಗಿದ್ದಾನೆ. ನಗರಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಶಾಕುಂತಲಾ ಅಕ್ಕಿ ಪರವಾಗಿ ಗಜೇಂದ್ರಸಿಂಗ್ ಪ್ರಚಾರ ಮಾಡಿದ್ದರು. ಇದು ಶಿವರಾಜ್ ಪೂಜಾರ್‌ನನ್ನು ಕೆರಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯ ದ್ವೇಷದಿಂದಲೇ ಗಜೇಂದ್ರನ ಕೊಲೆಯಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ರಾಜ್ಯದಲ್ಲಿಂದು 45 ಮಂದಿಗೆ ಕೋವಿಡ್ ಸೋಂಕು ದೃಢ - ಸಾವು ಶೂನ್ಯ..
ಇನ್ನು ಮಂಜುನಾಥ್ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಗದಗ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬುದರ ಬಗ್ಗೆ ತನಿಖೆ ಮಾಡುತ್ತೇವೆ. ಮೃತನ ಸಂಬಂಧಿಕರು ದೂರು ನೀಡಿದ ಬಳಿಕ ಎಫ್ಐಆರ್ ದಾಖಲಿಸಿಕೊಂಡು ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.