ಗದಗ: ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ಬಿಜೆಪಿ ಪಕ್ಷ ಕೊನೆಗೂ ದಶಕಗಳ ಬಳಿಕ ಮೊದಲ ಬಾರಿಗೆ ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷಗಾದಿಗೆ ಏರಿದೆ. ಆದ್ರೆ, ಇತ್ತ ಶತಾಯಗತಾಯ ಮತ್ತೊಮ್ಮೆ ಅಧಿಕಾರಕ್ಕೇರುವ ಕಸರತ್ತಿಗೆ ಇಳಿದಿದ್ದ ಕಾಂಗ್ರೆಸ್ಗೆ ಹಿನ್ನಡೆಯಾಗಿದ್ದು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಗೊಂದಲವಾಗಿದೆ ಅಂತ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದು, ಮರು ಚುನಾವಣೆಗೆ ಪಟ್ಟು ಹಿಡಿದಿದ್ದಾರೆ.
ಹೌದು, ಭಾರಿ ಕೂತೂಹಲ ಮೂಡಿಸಿದ್ದ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕೊನೆಗೂ ಮುಕ್ತಾಯಗೊಂಡಿದೆ. ಹಲವು ಗೊಂದಲಗಳ ನಡುವೆ ಬಿಜೆಪಿ ಅಭ್ಯರ್ಥಿಗಳು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿ ರಾಯಪ್ಪ ಅವರು ಬಿಜೆಪಿ ಸದಸ್ಯೆ ಉಷಾ ದಾಸರ್ ಅಧ್ಯಕ್ಷರನ್ನಾಗಿ ಮತ್ತು ಇನ್ನೋರ್ವ ಬಿಜೆಪಿ ಸದಸ್ಯೆ ಸುನಂದಾ ಬಾಕಳೆಯವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
ಮರು ಚುನಾವಣೆಗೆ ಕಾಂಗ್ರೆಸ್ ಪಟ್ಟು ! 35 ಸದಸ್ಯರು ಮತ್ತು ಓರ್ವ ಶಾಸಕ ಮತ್ತು ಓರ್ವ ಸಂಸದರು ಸೇರಿ ಒಟ್ಟು 37 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಮತ ಚಲಾಯಿಸಿದರು. ಕೈ ಎತ್ತುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಬಿಜೆಪಿಯಿಂದ 18 ಜನ ನಗರಸಭೆ ಸದಸ್ಯರು ಮತ್ತು ಓರ್ವ ಸಂಸದರು ಸೇರಿ ಒಟ್ಟು 19 ಮತಗಳನ್ನ ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಇನ್ನು ಈ ಒಂದು ಚುನಾವಣೆ ಭಾರಿ ಗೊಂದಲದಿಂದ ಕೂಡಿತ್ತು ಅಂತ ಶಾಸಕ ಹೆಚ್.ಕೆ.ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ. ಚುನಾವಣಾ ಅಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿಗೆ ಅನ್ಯಾಯವೆಸಗಿದ್ದಾರೆ ಅಂತ ಕಿಡಿಕಾರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಅಭ್ಯರ್ಥಿಗೆ ಹೆಚ್ಚು ಮತಗಳು ಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಬೇಕು ಅಂತ ಚುನಾವಣಾ ಅಧಿಕಾರಿ ಬಳಿ ನಾವು ಮನವಿ ಮಾಡಿಕೊಂಡೆವು. ಆದ್ರೆ ಅವರು ಅದು ಕಣ್ತಪ್ಪಿನಿಂದ ಆಗಿರೋ ಪ್ರಮಾದ. ಹೀಗಾಗಿ ಅದನ್ನು ಸರಿಪಡಿಸಿಕೊಳ್ತೇವೆ ಅಂತಿದ್ದಾರೆ. ಆದ್ರೆ ನಾವು ಮರು ಚುನಾವಣೆ ನಡೆಸಬೇಕು ಅಂತ ಒತ್ತಾಯ ಮಾಡ್ತಿದ್ದೇವೆ ಅಂತ ಹೆಚ್.ಕೆ.ಪಾಟೀಲ್ ತಿಳಿಸಿದರು. ಜೊತೆಗೆ ಮರು ಚುನಾವಣೆಗಾಗಿ ಕಾನೂನು ಮೊರೆ ಹೋಗಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:ಈ ಸರ್ಕಾರಿ ಹಾಸ್ಟೆಲ್ಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಇಷ್ಟಪಡ್ತಾರೆ: ಯಾವುದು ಗೊತ್ತಾ?
ಚುನಾವಣೆಯಲ್ಲಿ 15 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಇಬ್ಬರು ಪಕ್ಷೇತರರು ಮತ್ತು ಶಾಸಕ ಹೆಚ್.ಕೆ.ಪಾಟೀಲರನ್ನು ಸೇರಿಸಿ ಒಟ್ಟು 18 ಸಂಖ್ಯಾಬಲವನ್ನು ಹೊಂದಿತ್ತು. ಹೀಗಾಗಿ ಅಧಿಕಾರದ ಗದ್ದುಗೆ ಹಿಡಿಯುವ ಮ್ಯಾಜಿಕ್ ನಂಬರ್ಗೆ ಹತ್ತಿರವಿದ್ದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಭಾರಿ ಕಸರತ್ತು ನಡೆಸಿತ್ತು. ಮೂವರು ವಿಧಾನ ಪರಿಷತ್ ಸದಸ್ಯರು ಮತ್ತು ಓರ್ವ ರಾಜ್ಯಸಭಾ ಸದಸ್ಯರನ್ನೂ ಸಹ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಅರ್ಜಿ ಸಲ್ಲಿಸಿದ್ದರು. ಆದ್ರೆ ಅಂತಿಮ ಹಂತದಲ್ಲಿ ಕಾಂಗ್ರೆಸ್ನ ಆಸೆ ಈಡೇರಿಲಿಲ್ಲ. ಈಗ ಚುನಾವಣೆಯ ಪ್ರಕ್ರಿಯೆಯಲ್ಲಿಯೇ ಗೊಂದಲವಾಗಿದ್ದು, ಕಾಂಗ್ರೆಸ್ಗೆ ಅನ್ಯಾಯವಾಗಿದೆ ಅಂತ ಹೇಳ್ತಿದೆ. ಕಾನೂನು ಮೊರೆ ಹೋಗುವುದಾಗಿಯೂ ಹೆಳ್ತಿದೆ. ಮುಂದೆ ಇದು ಯಾವ ತಿರುವು ಪಡೆದುಕೊಳ್ಳುತ್ತದೆ ಅನ್ನೋದು ಕಾದು ನೋಡಬೇಕಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ