ಗದಗ: ಭಾರತ ಕೇವಲ ಹಿಂದೂಗಳ ದೇಶ ಮಾತ್ರವಲ್ಲ. ಇಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ದಲಿತರು ಹೀಗೆ ಅನೇಕ ಜಾತಿ, ಜನಾಂಗದವರಿದ್ದಾರೆ. ಇದು ಬಹುತ್ವದ ದೇಶ. ಹಿಂದೂ ರಾಷ್ಟ್ರ ಎನ್ನುವುದು ಬಿಜೆಪಿಯ ಸ್ಲೋಗನ್ ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿಂದು ಸರಕಾರಿ ಬಾಲಕಿಯರ ಬಾಲಮಂದಿರ ಉದ್ಘಾಟಿಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 1950ರಲ್ಲಿ ಜನಸಂಘ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೆ ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ. ಭಾರತ ಕೇವಲ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದರು.
ಎಬಿವಿಪಿ, ಭಜರಂಗದಳ ಇವೆಲ್ಲಾ ಬಿಜೆಪಿಯ ಅಂಗಸಂಸ್ಥೆಗಳು. ಸುಳ್ಳು ಹೇಳುವುದೇ ಇವರ ಕೆಲಸ. ಬಿಜೆಪಿ ಎಂದರೆ ಸುಳ್ಳಿನ ಕಾರ್ಖಾನೆ. ನಮ್ಮ ಸರಕಾರ ನುಡಿದಂತೆ ನಡೆದಿದೆ. 4 ಗ್ಯಾರಂಟಿಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದೆ. 5ನೇ ಗ್ಯಾರಂಟಿಯನ್ನು 2024ರ ಜನವರಿಯಲ್ಲಿ ಜಾರಿಗೊಳಿಸಲಾಗುವುದು. ಸರಕಾರದ ಬಳಿ ಅನುದಾನದ ಕೊರತೆ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ನೆರೆಯ ಕೇರಳದಲ್ಲಿ ಕೋವಿಡ್ ರೂಪಾಂತರಿ ತಳಿ ಸೋಂಕು ವೇಗವಾಗಿ ವ್ಯಾಪಿಸುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಸೋಂಕು ವ್ಯಾಪಿಸದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.