ಗದಗ: "ಹೋರಾಟ-ತ್ಯಾಗ-ಬಲಿದಾನಗಳಿಂದ ಕನ್ನಡ ನಾಡು ಉದಯವಾಗಿದೆ. ಈ ನಾಡಲ್ಲಿ ಕನ್ನಡತ್ವ ಮತ್ತಷ್ಟು ಆಳವಾಗಿ ಬೇರೂರಬೇಕು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗದಗದಲ್ಲಿ "ಕರ್ನಾಟಕ ಸಂಭ್ರಮ-50" ಅದ್ದೂರಿ ಕಾರ್ಯಕ್ರಮವನ್ನು ವೈಭವದ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, "ಕರ್ನಾಟಕ ಎಂದು ನಾಮಕರಣ ಆಗಲು ಶ್ರಮಿಸಿ ಹೋರಾಡಿದ ಕೆ.ಹೆಚ್.ಪಾಟೀಲ್ ಮತ್ತು ಎಲ್ಲ ಹೋರಾಟದ ಸಂಗಾತಿಗಳನ್ನು ಇಂದು ನಾನು ಸ್ಮರಿಸುತ್ತೇನೆ. ಅವತ್ತು ಕೆ.ಹೆಚ್.ಪಾಟೀಲ್, ಇಂದು ಹೆಚ್.ಕೆ.ಪಾಟೀಲ್. ಅವತ್ತು ದೇವರಾಜ ಅರಸು ಕುಳಿತಿದ್ದ ಮುಖ್ಯಮಂತ್ರಿ ಕುರ್ಚಿಯಲ್ಲಿ ಇವತ್ತು ನಾನು ಕುಳಿತಿದ್ದೇನೆ. ಇದೇನು ಕಾಕತಾಳೀಯವಲ್ಲ" ಎಂದರು.
"ಇಂಗ್ಲಿಷ್ನಲ್ಲಿ ಶೇಕ್ಸ್ ಪಿಯರ್ ಸಾಹಿತ್ಯ ರಚಿಸುವುದಕ್ಕೂ 500 ವರ್ಷಗಳ ಮೊದಲೇ ಕನ್ನಡದಲ್ಲಿ ವಿಶ್ವ ಮಟ್ಟದ ಅತ್ಯುನ್ನತ ಸಾಹಿತ್ಯ ರಚನೆಯಾಗಿತ್ತು. ಪಂಪನಿಂದ ಹಿಡಿದು ವಚನಕಾರರನ್ನೂ ಸೇರಿಸಿ ಹಲವರು ಅತ್ಯುನ್ನತ ಸಾಹಿತ್ಯ ರಚಿಸಿದ್ದರು ಎಂದು ಕನ್ನಡ ಭಾಷಾ ಹಿರಿಮೆಯನ್ನು ಉದಹರಿಸಿದರು.
ಕನ್ನಡ ಕಲಿಯದೆಯೂ ಕರ್ನಾಟಕದಲ್ಲಿ ವ್ಯವಹರಿಸಬಹುದು ಎನ್ನುವ ವಾತಾವರಣ ಬದಲಾಗಬೇಕು. ಕನ್ನಡದ ಸಂಸ್ಕೃತಿ ಜತೆಗೆ ನಮ್ಮೆಲ್ಲರಲ್ಲಿ ಕನ್ನಡತನ ಬೇರೂರಬೇಕು. ಆಗ ಮಾತ್ರ ಕನ್ನಡದ ವಾತಾವರಣ ಇಡಿ ನಾಡಿನಲ್ಲಿ ಪಸರಿಸುತ್ತದೆ" ಎಂದು ಹೇಳಿದರು.
"ಕನ್ನಡ ಸಂಸ್ಕೃತಿ ಎಂದಾಗ ಬಸವಾದಿ ಶರಣರ ಕಾಯಕ ಸಂಸ್ಕೃತಿಯೂ ಸೇರಿದೆ. ಬಸವಣ್ಣನವರ ಆಶಯದಂತೆ ವರ್ಗರಹಿತ, ಜಾತಿರಹಿತ ಸಮಾಜದ ನಿರ್ಮಾಣ ಮತ್ತು ಈ ಸಮಾಜದ ಅಭಿವೃದ್ಧಿ ನಮ್ಮ ಗುರಿಯಾಗಿದೆ. ಆ ಕಾರಣಕ್ಕೇ ಸರ್ವ ಜಾತಿ-ಧರ್ಮದವರ ಬದುಕನ್ನು ಎತ್ತರಿಸುವ ಗ್ಯಾರಂಟಿ ಕಾರ್ಯಕ್ರಮಗಳನ್ನು ನಾವು ನೀಡಿದ್ದೇವೆ" ಎಂದರು.