"ರಾಜಣ್ಣ ಹೇಳಿಕೆಗೆ ನಾನು ಉತ್ತರ ನೀಡಲು ಹೋಗುವುದಿಲ್ಲ.. ನಾನೊಂದು ಹೇಳಿದರೆ ನೀವೇ ಒಂದು ಬರೆಯುತ್ತೀರಿ": ಸಿಎಂ ಗದಗ:ರಾಜಣ್ಣ ಹೇಳಿಕೆಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ನಾನೊಂದು ಹೇಳಿದರೆ ನೀವೇ ಒಂದು ಬರೆಯುತ್ತೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗದಗದಲ್ಲಿ ನಡೆದ "ಕರ್ನಾಟಕ ಸಂಭ್ರಮ-50" ಅದ್ದೂರಿ ಕಾರ್ಯಕ್ರಮದ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಈ ವೇಳೆ, ಡಿಸಿಎಂ ಡಿಕೆ ಶಿವಕುಮಾರ್ ಸಹ ಇದ್ದರು.
ತುಮಕೂರಿನಲ್ಲಿ ಸಚಿವ ಕೆ ಎನ್ ರಾಜಣ್ಣ ಅವರು, ಜಿ ಪರಮೇಶ್ವರ್ಗೆ ಸಿಎಂ ಆಗುವ ಅವಕಾಶವಿದೆ. ಸಿದ್ದರಾಮಯ್ಯ ಹೊರತುಪಡಿಸಿದರೆ ಪರಮೇಶ್ವರ್ ಸಿಎಂ ಆಗಬೇಕು ಎಂದು ನಾವು ಬಯಸುತ್ತೇವೆ ಎಂಬ ಹೇಳಿಕೆಯನ್ನು ಮಾಧ್ಯಮದವರು ಸಿಎಂ ಸಿದ್ದರಾಮಯ್ಯ ಬಳಿ ಕೇಳಿದಾಗ, "ರಾಜಣ್ಣ ಹೇಳಿಕೆಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ನಾನು ಒಂದು ಹೇಳಿದರೆ ನೀವೇ ಒಂದು ಬರೆಯುತ್ತೀರಿ" ಎಂದು ಮಾಧ್ಯಮದವರ ಮೇಲೆ ಸಿಟ್ಟಾದರು.
ಮುಂದುವರೆದು, ಮುಖ್ಯಮಂತ್ರಿ ವಿಚಾರದಲ್ಲಿ ನಾನು ನಿನ್ನೆ ಹೈಕಮಾಂಡ್ ಏನು ಹೇಳುತ್ತದೆ ಅದಕ್ಕೆ ಬದ್ಧರಾಗಿರುತ್ತೇವೆ ಎಂದಿದ್ದೆ. ಅಷ್ಟೇ ಅಲ್ಲ ಇದು ಹೈಕಮಾಂಡ್ ಇರುವ ಪಕ್ಷ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಕರ್ನಾಟಕ ನಾಮಕರಣದಲ್ಲಿ ಗದಗ ಜಿಲ್ಲೆಯ ಕೊಡುಗೆ ಅನನ್ಯ- ಡಿಕೆಶಿ: ಸುದ್ದಿಗೋಷ್ಠಿ ಮುನ್ನ ಗದಗದಲ್ಲಿ ನಡೆದಿದ್ದ "ಕರ್ನಾಟಕ ಸಂಭ್ರಮ-50" ಅದ್ದೂರಿ ಕಾರ್ಯಕ್ರಮವನ್ನು ಉದ್ದೇಶಿಸಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. "ಕರ್ನಾಟಕ ಏಕೀಕರಣ ಹಾಗೂ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡುವ ವಿಷಯದಲ್ಲಿ ಗದಗ ಜಿಲ್ಲೆ ನೀಡಿರುವ ಕೊಡುಗೆ ಅನನ್ಯ. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡುವ ಸಮಯದಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು.
ಅಂದಿನ ಸಿಎಂ ದೇವರಾಜ ಅರಸ್ ಹಾಗೂ ಸಚಿವರಾಗಿದ್ದ ಗದಗ ಕ್ಷೇತ್ರದ ಶಾಸಕ ಕೆ ಎಚ್ ಪಾಟೀಲ್ ಅವರು ನಾಮಕರಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಂತೆ ಕರ್ನಾಟಕ 50 ವರ್ಷ ಪೂರೈಸಿದ ಸುಸಂದರ್ಭದಲ್ಲಿ ನಿಮ್ಮೆಲ್ಲರ ಪ್ರೀತಿ ಬೆಂಬಲದಿಂದ ಸುವರ್ಣ ಮಹೋತ್ಸವ ಆಚರಿಸುವ ಅವಕಾಶವೂ ಕಾಂಗ್ರೆಸ್ಗೆ ಸಿಕ್ಕಿದೆ. ಅನುಭವ ಮಂಟಪದಂತಿರುವ ಕಾಂಗ್ರೆಸ್ ಪಕ್ಷ ಸದಾ ಜನರ ಹಾಗೂ ರಾಜ್ಯದ ಏಳಿಗೆಯನ್ನು ಬಯಸುತ್ತದೆ" ಎಂದು ಹೇಳಿದರು.
ಪಂಚ ಗ್ಯಾರಂಟಿಯಿಂದ ರಾಜ್ಯ ಜನರ ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಬೆಳವಣಿಗೆ- ಸಚಿವ ಹೆಚ್.ಕೆ.ಪಾಟೀಲ್: ಇದೇ ಕಾರ್ಯಕ್ರಮದಲ್ಲಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನರ ಆರ್ಥಿಕ ಸ್ಥಿತಿ ಗಮನಾರ್ಹ ಬೆಳವಣಿಗೆ ಕಂಡಿದೆ ಎಂದರು. ಬಡತನ ರೇಖೆಯುಲ್ಲಿದ್ದ ಲಕ್ಷಾಂತರ ಕುಟುಂಬಗಳು ಕೇವಲ ಐದೇ ತಿಂಗಳಲ್ಲಿ ಕೆಳ ಮಧ್ಯಮ ವರ್ಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.
ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಶಕ್ತಿ ಯೋಜನೆಗಳು ಬಡವರ ಮುಖದಲ್ಲಿ ಮಂದಹಾಸ ಮೂಡಿಸಿವೆ ಎಂದು ಸಮರ್ಥಿಸಿಕೊಂಡರು. ಜತೆಗೆ ಇದೇ ವೇಳೆ ಗದಗ ನಗರಕ್ಕೆ 5 ಸಾವಿರ ಹಾಗೂ ಗದಗ ಜಿಲ್ಲೆಗೆ 10 ಸಾವಿರ ಮನೆಗಳನ್ನು ಕೊಡಬೇಕು ಎಂದು ಪಾಟೀಲರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು. ಎಲ್ಲರಿಗೂ ಸೂರು ಸಿಗಬೇಕು ಎನ್ನುವುದೇ ಇದರ ಮುಖ್ಯ ಉದ್ದೇಶವಾಗಿದೆ. ಬೇರೆ ಏನನ್ನೂ ಕೇಳಲ್ಲ. ಇದೊಂದು ಮನವಿಗೆ ಸ್ಪಂದಿಸಬೇಕು. ಗದಗ ಜಿಲ್ಲೆಯು ಜನರ ವಸತಿ ರಹಿತರ ಸಮಸ್ಯೆಗೆ ಮುಖ್ಯಮಂತ್ರಿ ಅವರು ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
450 ಹಾಸಿಗೆಗಳ ಜಿಲ್ಲಾಸ್ಪತ್ರೆ ಕಟ್ಟಡ ಲೋಕಾರ್ಪಣೆ:ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾದ 450 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವೈದ್ಯಕೀಯ ಹಾಗೂ ಉನ್ನತ ಶಿಕ್ಷಣ ಸಚಿವರಾದ ಶರಣ ಪ್ರಕಾಶ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಪೌರಾಡಳಿತ ಸಚಿವ ರಹೀಂಖಾನ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಧಾನ ಪರಿಷತ್ ಉಪ ಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಜಿ.ಎಸ್.ಪಾಟೀಲ್, ಶ್ರೀನಿವಾಸ ಮಾನೆ, ಜೆ.ಟಿ.ಪಾಟೀಲ್, ಎನ್.ಎಚ್.ಕೊನರಡ್ಡಿ, ಮಾಜಿ ಲೋಕಸಭಾ ಸದಸ್ಯ ಮಂಜುನಾಥ ಕುನ್ನೂರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕರಿಗೌಡರ ಸೇರಿದಂತೆ ಜಿಮ್ಸ್ ವೈದ್ಯಕೀಯ ಹಾಗೂ ಆಡಳಿತ ಸಿಬ್ಬಂದಿ ಭಾಗಿಯಾಗಿದ್ದರು.
ಇದನ್ನೂ ಓದಿ:ಹೋರಾಟ - ತ್ಯಾಗ - ಬಲಿದಾನಗಳಿಂದ ಕನ್ನಡ ನಾಡು ಉದಯವಾಗಿದೆ: ಸಿಎಂ ಸಿದ್ದರಾಮಯ್ಯ