ಗದಗ: ವಿಜಯ ಸಂಕಲ್ಪ ಯಾತ್ರೆಗೆ ಬಂದ ಜನರನ್ನು ನೋಡಿದರೆ ಇದು ವಿಜಯೋತ್ಸವ ಅನಿಸುತ್ತಿದೆ. ಇದು ವಿಜಯೋತ್ಸವ ಕಾರ್ಯಕ್ರಮ ಏಕೆ ಆಗಬಾರದು? 2023ರ ವಿಜಯೋತ್ಸವ ಸಂಭ್ರಮ ಆಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ನರಗುಂದದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಳಿದ ಪಕ್ಷಗಳಂತೆ ನಾವು ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿಯುವುದಿಲ್ಲ. ಅಭಿವೃದ್ಧಿ ನಮ್ಮ ಮಂತ್ರವಾಗಿದ್ದು, ನಾವು ಮಾಡಿರುವ ಆ ಅಭಿವೃದ್ಧಿ ಕೆಲಸಗಳ ಮೂಲಕವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದ ಚಿತ್ರಣ ಬದಲಾಗಬೇಕು: ಒಂದು ಮನೆಗೆ ಏನು ಬೇಕೋ ಅದನ್ನು ಕೊಟ್ಟಿದ್ದು ಪ್ರಧಾನಿ ಮೋದಿಜಿ. ರಾಜ್ಯ ಸರ್ಕಾರದಿಂದ ಜಾರಿಗೆ ತರಲಾದ ರೈತ ವಿದ್ಯಾನಿಧಿ ಮೂಲಕ ರೈತರ ಮಕ್ಕಳಿಗೆ ಸಾಕಷ್ಟು ಅನುಕೂಲವಾಗಿದೆ. ರೈತರ ಬದುಕು, ರೈತ ಮಕ್ಕಳ ಪರಸ್ಥಿತಿಯನ್ನು ಕಣ್ಣಾರೆ ನೋಡಿದ್ದೇವೆ. ಗ್ರಾಮೀಣ ಪ್ರದೇಶದ ಎಲ್ಲ ಮನೆಗಳ ಚಿತ್ರಣ ಬದಲಾಗಬೇಕು. ಇದು ನಮ್ಮ ಸರ್ಕಾರದ ಮಹತ್ವದ ಯೋಜನೆ ಎಂದು ಸಿಎಂ ಹೇಳಿದರು.
ಹುಟ್ಟುತ್ತ ಬಡವರಾಗಿದ್ದರೂ ಕೂಡಾ ಅವಕಾಶಗಳನ್ನು ಬಳಸಿಕೊಂಡು ಜನರು ಮುಂದೆ ಬರಲು ನಮ್ಮ ಸರ್ಕಾರ ಸಹಾಯ ಮಾಡುತ್ತಿದೆ. ದುಡಿಯುವ ವರ್ಗಕ್ಕೆ ನಮ್ಮ ಸರ್ಕಾರ ಮೊದಲು ಮಾನ್ಯತೆ ಕೊಡುತ್ತಿದೆ. ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ಹಣ ಕೂಡುವ ಕೆಲಸ ಮಾಡುತ್ತಿದೆ. ರೈತರಿಗೆ ಬೀಜ ಗೊಬ್ಬರ ಕೊಡಲು ವಿನೂತನ ಯೋಜನೆ ಮಾಡಿದ್ದೇವೆ. ವಿದ್ಯಾರ್ಥಿನಿಯರಿಗೆ, ದುಡಿಯವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡುವ ಕಾರ್ಯ ಮಾಡಿದ್ದೇವೆ ಎಂದು ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು.