ಗದಗ:ವಿಧಾನ ಪರಿಷತ್ ಚುನಾವಣೆಗೆ ಎಲ್ಲಾ ಪಕ್ಷಗಳು ಸರ್ಕಸ್ ನಡೆಸುತ್ತಿವೆ. ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ರಾಜ್ಯದ ವಿವಿಧೆಡೆ ಸುತ್ತಿ ಪಕ್ಷಗಳ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಸೋಮವಾರ ಸಿಎಂ ಹಾಗೂ ಮಾಜಿ ಸಿಎಂ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಗದಗ್ನಲ್ಲಿ ಮತಯಾಚಿಸಿದ್ದಾರೆ.
ಧಾರವಾಡ, ಗದಗ, ಹಾವೇರಿ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆ ಪ್ರಯುಕ್ತ ಗದಗ್ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಚಾರ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭಾಗಿಯಾಗಿದ್ದರು.
ಒಮಿಕ್ರಾನ್ ಭೀತಿಯ ನಡುವೆಯೂ ನಡೆದ ಸಭೆಯಲ್ಲಿ ನೂರಾರು ಮಂದಿ ಗ್ರಾಮ ಪಂಚಾಯಿತಿ ಸದಸ್ಯರು, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ನವರು ಸುವರ್ಣ ಗ್ರಾಮ ಯೋಜನೆಯನ್ನು ಹಳ್ಳ ಹಿಡಿಸಿದ್ದಾರೆ. ಸಿದ್ದರಾಮಯ್ಯ ಭಾಷಣ ಮಾಡ್ತಾರೆ, ಅದರಿಂದ ಹೊಟ್ಟೆ ತುಂಬುವುದಿಲ್ಲ. ಎಲ್ಲಾ ಅಧಿಕಾರವೂ ತನ್ನಲ್ಲಿಯೇ ಇರಬೇಕು ಎಂಬುದು ಕಾಂಗ್ರೆಸ್ ನೀತಿ ಎಂದು ಹರಿಹಾಯ್ದಿದ್ದಾರೆ.
ಚುನಾವಣೆ ಮೂರು ತಿಂಗಳಿದ್ದಂತೆ, 15 ಲಕ್ಷ ಮನೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿತ್ತು. ಒಂದು ಮನೆಯನ್ನು ಕೊಟ್ಟಿಲ್ಲ. ವಾಜಪೇಯಿ ಕಾಲದಲ್ಲಿ 30 ಕೆಜಿ ಕೊಡ್ತಿದ್ದೆವು. ಕಾಂಗ್ರೆಸ್ ಬಂದ ಮೇಲೆ ಏಳು ಕೆಜಿಗೆ ಇಳಿಸಲಾಯಿತು ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.