ಗದಗ: ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಭಾಷಣಕ್ಕೆ ಶಿರಹಟ್ಟಿ ತಾಲೂಕಿನ ಸುಗ್ನಳ್ಳಿ ಗ್ರಾಮಸ್ಥರು ಅಡ್ಡಿಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾಷಣದ ಮಧ್ಯೆಯೇ ಗ್ರಾಮಸ್ಥರಿಂದ ಶಾಸಕರಿಗೆ ತರಾಟೆ.. ಸ್ಥಳದಿಂದ ಕಾಲ್ಕಿತ್ತ MLA ರಾಮಣ್ಣ
ಶಾಸಕ ರಾಮಣ್ಣ ಲಮಾಣಿ ಭಾಷಣ ಮಾಡುತ್ತಿದ್ದ ವೇಳೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ಶಿರಹಟ್ಟಿ ತಾಲೂಕಿನ ಸುಗ್ನಳ್ಳಿಯಲ್ಲಿ ನಡೆದಿದೆ.
ಎಲೆಕ್ಷನ್ ಮುಗಿದ ಮೇಲೆ ಇದೇ ಮೊದಲ ಬಾರಿಗೆ ನಮ್ಮೂರಿಗೆ ಬಂದಿದ್ದೀರಿ, ನಮ್ಮೂರ ಕೆರೆಗೆ ನೀರು ತುಂಬಿಸುವುದು ಬೇಡ. ಊರಿನ ರಸ್ತೆಗೆ ಕಾಂಕ್ರೀಟ್ ಹಾಕಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕಾರ್ಯಕರ್ತನೊಬ್ಬ ಶಾಸಕರ ಕೈಲಿದ್ದ ಮೈಕ್ ಕಸಿದುಕೊಂಡು ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಮುಂದಾದ. ಇದರಿಂದ ಮುಜುಗರಕ್ಕೊಳಗಾಗಿ ಶಾಸಕ ರಾಮಣ್ಣ ಲಮಾಣಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಸಮಾರಂಭದಲ್ಲಿ ಸಂಸದ ಶಿವಕುಮಾರ್ ಉದಾಸಿ ಕೂಡ ಹಾಜರಿದ್ದರು.
ಕಳೆದ ಆಗಸ್ಟ್ 23 ರಂದು ಸುಗ್ನಳ್ಳಿ ಗ್ರಾಮಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಕೆರೆ ತುಂಬಿಸುವ ಕಾರ್ಯಕ್ಕೆ ಆಹ್ವಾನ ನೀಡಿದ್ದ ನಾಯಕರು ಬಳಿಕ ಆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರು. ಶಾಸಕರ ಈ ನಡೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ.