ಗದಗ:ಕಳೆದ 2-3 ದಿನಗಳಿಂದ ನಿತ್ಯವೂ ಗಜೇಂದ್ರಗಡ ಮತ್ತು ನಾಗೇಂದ್ರಗಡ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಚಿರತೆ ಬೇಟೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಇನ್ನು ಚಿರತೆ ಹಾವಳಿಯಿಂದ ಇಲ್ಲಿನ ಜನರು ಭಯಭೀತರಾಗಿದ್ದಾರೆ.
ಗಜೇಂದ್ರಗಡದ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಪಟ್ಟಣ ಮತ್ತು ಪಟ್ಟಣದ ಹೊರವಲಯದಲ್ಲಿರುವ ನಿವಾಸಿಗಳು ಚಿರತೆ ಭಯದಿಂದ ಕಾಲ ಕಳೆಯುತ್ತಿದ್ದಾರೆ. ಗಜೇಂದ್ರಗಡ ಮತ್ತು ನಾಗೇಂದ್ರಗಡ ಗುಡ್ಡದಲ್ಲಿ ಚಿರತೆ ಇರುವುದನ್ನು ಇಲ್ಲಿನ ಜನರು ನೋಡಿದ್ದಾರೆ. ಇನ್ನು 2 ದಿನಗಳ ಹಿಂದೆಯಷ್ಟೇ ಒಂದು ಕುರಿ ಮರಿಯನ್ನು ಚಿರತೆ ತಿಂದು ಹಾಕಿದೆ.
ಗುಡ್ಡದ ಕಡೆ ಹೋಗಲು ಜನರ ಹಿಂದೇಟು
ಇದರಿಂದ ಕುರಿಗಾಯಿಗಳು, ದನಗಾಯಿಗಳು ಭಯಭೀತರಾಗಿ ಅತ್ತಕಡೆ ಮುಖ ಹಾಕುತ್ತಿಲ್ಲ. ಅಷ್ಟೇ ಅಲ್ಲದೆ, ಗುಡ್ಡದ ಪಕ್ಕದಲ್ಲಿರುವ ಜಮೀನುಗಳಿಗೆ ರೈತರು ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಗುಡ್ಡದ ಕಡೆಯ ಜನರು ಮನೆಯಿಂದ ಹೊರಗಡೆ ಬರೋದಕ್ಕೆ ಹಿಂದೇಟು ಹಾಕ್ತಿದ್ದಾರೆ. ಎರಡು ಮೂರು ದಿನಗಳಿಂದ ಗುಡ್ಡದ ಕಡೆ ಇರುವ ಜಮೀನುಗಳಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಇದು ಜನರಲ್ಲಿ ಇನ್ನಷ್ಟು ಆತಂಕ ಸೃಷ್ಠಿಸಿದೆ.
ಗಜೇಂದ್ರಗಡ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ ಅರಣ್ಯಾಧಿಕಾರಿಗಳಿಗೆ ಸಿಗುತ್ತಲೇ ಇಲ್ಲ ಚಿರತೆ
ಇನ್ನು ಚಿರತೆ ಪ್ರತ್ಯಕ್ಷವಾಗುತ್ತಿದ್ದಂತೆ ಚಿರತೆ ಹಿಡಿಯುವಂತೆ ರೈತರು, ಕುರಿಗಾಹಿಗಳು, ಸ್ಥಳೀಯರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಒತ್ತಡ ಹಾಕ್ತಿದ್ದಾರೆ. ಅದರಂತೆ ಅರಣ್ಯ ಇಲಾಖೆಯ ಸಿಬ್ಬಂದಿಯೂ ಸಹ ಚಿರತೆ ಸೆರೆಗೆಂದು ಕಾರ್ಯಾಚರಣೆಗೆ ಇಳಿದಿದೆ.
ಎರಡು ಮೂರು ದಿನಗಳಿಂದ ಬಂದೂಕು ಹಿಡಿದು ಸಿಬ್ಬಂದಿ ಆ ಗುಡ್ಡದಿಂದ ಈ ಗುಡ್ಡ ಎಂದು ತಿರುಗಾಡ್ತಿದ್ದಾರೆ. ಆದರೆ, ಚಿರತೆ ಮಾತ್ರ ಅವರ ಕಣ್ಣಿಗೆ ಬಿದ್ದಿಲ್ಲ. ಹೀಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಚಿರತೆ ಬೇರೆಡೆಗೆ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಪಟ್ಟಣದ ಸುತ್ತಲೂ ಸುಮಾರು 10ರಿಂದ 20 ಕಿಮೀ. ಗುಡ್ಡ ಇದೆ. ಇನ್ನು ನಾಗೇಂದ್ರಗಡ ಗುಡ್ಡದಲ್ಲಿ ಕಾರ್ಯಾಚರಣೆ ನಡೆಸಿದರೆ, ಗಜೇಂದ್ರಗಡ ಗುಡ್ಡಕ್ಕೆ ಚಿರತೆ ಎಂಟ್ರಿ ಕೊಡ್ತಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಚಿರತೆ ಒಮ್ಮೆ ಮಾಂಸ ತಿಂದರೆ ಎರಡು ಮೂರು ದಿನದವರೆಗೂ ಮಾಂಸ ತಿನ್ನೋದಿಲ್ಲವಂತೆ. ಹಾಗಾಗಿ ಒಂದು ಸುರಕ್ಷಿತ ಸ್ಥಳದಲ್ಲಿ ಬೀಡುಬಿಟ್ಟಿರುತ್ತದೆ ಎಂಬುದು ತಜ್ಞರ ಮಾತು. ಹೀಗಾಗಿ ಮತ್ತೆ ಗುಡ್ಡದಿಂದ ಹೊರ ಬರುವವರೆಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.