ಗದಗ:'ಮುದ್ರಣಕಾಶಿ' ಎಂದೇ ಪ್ರಸಿದ್ಧವಾದ ಗದಗ ಜಿಲ್ಲೆಯಲ್ಲಿ ತಯಾರಾಗುತ್ತಿರುವ ರಥಗಳಿಗೆ ಅಂತಾರಾಜ್ಯಗಳಲ್ಲಿ ಭಾರಿ ಬೇಡಿಕೆಯಿದೆ. ಈ ಹಿನ್ನೆಲೆ ರಥದ ಕಾರ್ಖಾನೆಯೊಂದು ತಲೆ ಎತ್ತಿ ನಿಂತಿದೆ. ವಿಭಿನ್ನ ವಿನ್ಯಾಸ, ಕೆತ್ತನೆಯುಳ್ಳ ರಥಗಳು ಸೌಂದರ್ಯತೆಗೆ ಹೆಸರುವಾಸಿಯಾಗಿದೆ. ಸೂಕ್ಷ್ಮ ಕೆತ್ತನೆಗಳ ಕಲೆಯನ್ನ ಇಲ್ಲಿನ ರಥ ಶಿಲ್ಪಿಗಳು ಕರಗತ ಮಾಡಿಕೊಂಡಂತಿದೆ.
ಗದಗನಲ್ಲಿ ತಯಾರಾಗುತ್ತಿರುವ ರಥಗಳಿಗೆ ದೇಶದಾದ್ಯಂತ ಭಾರಿ ಬೇಡಿಕೆ ಬಂದಿದೆ. ಅದರಲ್ಲಿಯೂ ಕೇರಳ, ತಮಿಳುನಾಡಿನ ಬಹುತೇಕ ದೇವಸ್ಥಾನಗಳಿಗೆ ರಥಗಳನ್ನು ಗದಗದಿಂದಲೇ ಮಾಡಿಕೊಡಲಾಗಿದೆ.
ಗದಗ ನಗರದ ನಿವಾಸಿಗಳಾದ ಬಸವರಾಜ್ ಆಚಾರ್ಯ ಮತ್ತು ಗಾಳಪ್ಪ ಆಚಾರ್ಯ ಎಂಬ ಸಹೋದರರು ರಥ ನಿರ್ಮಾಣ ಕಾರ್ಯದಿಂದಲೇ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೂ ಚಿರಪರಿಚತರಾಗಿದ್ದಾರೆ. ಸುಮಾರು 25 ವರ್ಷಗಳಿಂದ 'ಬ್ರಹ್ಮಋಷಿ ರಥ ಶಿಲ್ಪಂ' ಕಲಾ ಕೇಂದ್ರ ತೆರೆದಿದ್ದು, ಇಲ್ಲಿ ಬ್ರಹ್ಮರಥ ಮತ್ತು ಚಿಕ್ಕ ರಥಗಳನ್ನ ನಿರ್ಮಾಣ ಮಾಡಿಕೊಂಡು ಬರುತ್ತಿದ್ದಾರೆ.
ಅಷ್ಟಭುಜಾಕೃತಿ, ಷಟ್ಬುಜಾಕೃತಿ, ಚತುರ್ಭುಜಾಕೃತಿ, ಶೈವ ವೈಷ್ಣವ ಧರ್ಮದ ಪ್ರಕಾರ, ಒಂದೊಂದು ರಥಗಳು ಸುಮಾರು 1 ಕೋಟಿಗಿಂತಲೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಿ ದೇವಸ್ಥಾನಗಳಿಗೆ ಅರ್ಪಿಸುತ್ತಿದ್ದಾರೆ. ಸದ್ಯ ಇವರು ಆಂಧ್ರಪ್ರದೇಶದ ಯೋಗ ನರಸಿಂಹ ದೇವಸ್ಥಾನಕ್ಕೆ ಬ್ರಹ್ಮ ರಥ ನಿರ್ಮಾಣ ಮಾಡಿಕೊಡುತ್ತಿದ್ದಾರೆ. ಅದರ ಬೆಲೆ ಸುಮಾರು 1 ಕೋಟಿ 50 ಲಕ್ಷ ರೂ.ಗೂ ಅಧಿಕ ಎನ್ನಲಾಗ್ತಿದೆ.
ಇದನ್ನೂ ಓದಿ:ಭಾರತದಲ್ಲಿ ಹೈಡ್ರೋಪೋನಿಕ್ಸ್ ಕೃಷಿ.. ಮತ್ತೊಂದು ಹಸಿರುಕ್ರಾಂತಿಗೆ ಅಡಿಪಾಯವಾಗಲಿದೆಯಾ ಹೊಸ ತಂತ್ರಜ್ಞಾನ?