ಗದಗ:ಅಗತ್ಯ ವಸ್ತುಗಳಬೆಲೆ ಹೆಚ್ಚಳಕ್ಕೆ ಕಾರಣ ನಾವಲ್ಲ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಇದಕ್ಕೆ ಕಾರಣ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ನಾವು ಏರಿಸುತ್ತೇವಾ ಎಂದು ಸಚಿವ ಎಚ್.ಕೆ. ಪಾಟೀಲ್ ಪ್ರಶ್ನಿಸಿದರು. ಬೆಲೆ ಏರಿಕೆಗೆ ರಾಜ್ಯ ಬಜೆಟ್ ಕಾರಣ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ತಡೀಬೇಕು. ಅದು ಅವರ ಜವಾಬ್ದಾರಿ, ಅವರು ವಿಫಲರಾಗಿದ್ದಾರೆ. ಹಾಗಾಗಿ ಮತ್ತೊಬ್ಬರತ್ತ ಬೆರಳು ಮಾಡುತ್ತಿದ್ದಾರೆ ಎಂದರು.
ಕಿರಾಣಿ ಅಂಗಡಿಯವರು ಬೆಲೆ ಏರಿಸಲ್ಲ. ಕೇಂದ್ರದ ನೀತಿ ಮತ್ತು ಯೋಜನೆಯ ಮೇಲೆ ಬೆಲೆ ಏರಿಕೆ ಆಗುತ್ತದೆ. ಕಚ್ಚಾ ತೈಲ ಬೆಲೆ ಹೆಚ್ಚಿಗೆ ಆದರೆ ಬೆಲೆ ಏರಿಕೆ ಆಗುವುದು ಸಹಜ. ಪ್ರಲ್ಹಾದ್ ಜೋಶಿಯವರು ತಮಗೆ ತಿಳಿದ್ದಿದ್ದನ್ನು ಹೇಳುತ್ತಿದ್ದಾರೆ. ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣವೋ? ರಾಜ್ಯ ಸರ್ಕಾರ ಕಾರಣವೋ ಅಂತ ಅವರನ್ನು ನಾನೇ ಕೇಳುತ್ತೇನೆ ಎಂದು ಹೇಳಿದರು.
ನಿಮ್ಮ ತಪ್ಪು ನಿಲುವುಗಳಿಂದ, ಬೇಜವಾಬ್ದಾರಿ ಮತ್ತು ಬಡವರ ಮೇಲಿರುವ ನಿಮ್ಮ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ. ನಾವು ಬೆಲೆ ಏರಿಕೆ ಸಂದರ್ಭದಲ್ಲಿ ಬಡವರ ಅನುಕೂಲತೆಗಾಗಿ ಕಾರ್ಯಕ್ರಮ ಕೊಟ್ಟಿದ್ದೇವೆ. ನಿಮ್ಮದು ಜವಾಬ್ದಾರಿಯಿಂದ ನುಸುಳಿಕೊಳ್ಳುವ ನೀತಿ ಎಂದು ದೂರಿದರು.
ಇದೇ ವೇಳೆ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪನೆ ಮಾಡುವ ನೂತನ ಯೋಜನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಸರ್ಕಾರದಿಂದ ಗ್ರಾಮ ನ್ಯಾಯಾಲಯ ಸ್ಥಾಪನೆ ಮಾಡುವ ಚಿಂತನೆ ನಡೆದಿದೆ. ರಾಜ್ಯದಲ್ಲಿ ಒಂದು ಸಾವಿರ ಗ್ರಾಮ ನ್ಯಾಯಾಲಯ ಸ್ಥಾಪನೆ ಮಾಡುವ ಪ್ರಸ್ತಾಪ ಸರಕಾರದ ಮುಂದಿದೆ. ಚರ್ಚೆ, ಚಿಂತನೆ ಕೂಡ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.