ಕರ್ನಾಟಕ

karnataka

ETV Bharat / state

ಜಮೀನು ಹಂಚಿಕೆಯಲ್ಲಿ ಭ್ರಷ್ಟಾಚಾರ... ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೇಲೆ ಲಂಚ ಪಡೆದ ಆರೋಪ

ಗದಗದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜಮೀನು ಹಂಚಿಕೆ ಹೆಸರಿನಲ್ಲಿ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಆರೋಪಿಸಲಾಗಿದೆ.

ಲಂಚ ಪಡೆದ ಆರೋಪ

By

Published : Feb 25, 2019, 11:03 AM IST

ಗದಗ: ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಸರ್ಕಾರವು ಕೆಲ ಮಾನದಂಡಗಳ ಮೇರೆಗೆ ಅರಣ್ಯ ಜಮೀನುಗಳನ್ನು ಹಂಚುವಂತೆ ಆದೇಶ ಮಾಡಿದೆ. ಆದ್ರೆ ಈ ಆದೇಶ ಪಡೆದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾತ್ರ ಜಮೀನು ಹಂಚಿಕೆ ಹೆಸರಿನಲ್ಲಿ ಹಣ ವಸೂಲಿಗೆ ಇಳಿದಿದ್ದಾರೆ ಎಂದು ಆರೋಪಿಸಲಾಗಿದೆ.

ಇಲ್ಲಿನ ಬಗರ್ ಹುಕುಂ ಸಾಗುವಳಿದಾರರು ತಮ್ಮ ತಂದೆ-ತಾತನ ಕಾಲದಿಂದ್ಲೂ ಅರಣ್ಯ ಜಮೀನಲ್ಲಿ ಉಳುಮೆ ಮಾಡ್ತಾ ಬಂದಿದ್ದಾರೆ. ಇದನ್ನು ಗಮನಿಸಿದ ಸರ್ಕಾರ ಅವರನ್ನು‌ ಒಕ್ಕಲೆಬ್ಬಿಸೋದು ಬೇಡ ಎಂದು ಆ ಜಮೀನುಗಳನ್ನು ಕೆಲ ಮಾನದಂಡಗಳ ಮೇರೆಗೆ ಅವರಿಗೆ ಹಂಚುವಂತೆ ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿತ್ತು. ಆದರೆ ಇಲಾಖೆ ಮಾತ್ರ ಫಲಾನುಭವಿಗಳ ಪಟ್ಟಿ ಅಂತಿಮವಾಗಿ ವರ್ಷವಾದ್ರೂ, ಇನ್ನೂ ಕೂಡಾ ಹಕ್ಕು ಪತ್ರ ನೀಡುತ್ತಿಲ್ಲ. ಇದು ಇಲ್ಲಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ರೈತರ ಗೋಳಿನ ಕಥೆ ಹೇಳತೀರದಾಗಿದೆ. ಇಲ್ಲಿ ಸುಮಾರು 480 ಜನ‌ ಬಗರ್ ಹುಕುಂ ಸಾಗುವಳಿದಾರರಿದ್ದಾರೆ. ಅವರ ತಂದೆ-ತಾತನ‌ ಕಾಲದಿಂದಲೂ ಉಳುಮೆ ಮಾಡಿಕೊಂಡು ಬಂದಿದ್ದ ಜಮೀನುಗಳನ್ನು, ಅವರಿಗೆ ನೀಡಿ ಎಂದು ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಆದೇಶ ಮಾಡಿತ್ತು. ಅದರಂತೆ ಗದಗ ತಾಲೂಕಿನ ಅನೇಕ ರೈತರಿಗೆ ಬಗರ್ ಹುಕುಂ ಸಾಗುವಳಿದಾರರು ಎಂದು ಈಗಾಗಲೇ ಹಕ್ಕುಪತ್ರ ವಿತರಣೆ ಮಾಡಿ ವರ್ಷಗಳು ಕಳೆದಿವೆ. ಆದ್ರೆ ಮುಂಡರಗಿ ತಾಲೂಕಿನ ಡೋಣಿ, ಅತ್ತಿಕಟ್ಟಿ, ಡೋಣಿ ತಾಂಡಾ, ಶಿಂಗಟರಾಯನಕೆರಿ, ಶಿರಹಟ್ಟಿ ತಾಲೂಕಿನ ಅಕ್ಕಿಗುಂದ, ಶೆಟ್ಟಿಕೇರಿ, ಜಲ್ಲಿಗೇರಿ, ದೇವಿಹಾಳ, ಕಡಕೋಳ, ಚನ್ನಪಟ್ಟಣ ಗ್ರಾಮದ‌ ರೈತರಿಗೆ ಮಾತ್ರ ಹಕ್ಕುಪತ್ರ ನೀಡಿಲ್ಲ.

ಜಮೀನು ಹಂಚಿಕೆಯಲ್ಲಿ ಭ್ರಷ್ಟಾಚಾರ

ಫಲಾನುಭವಿಗಳ ಪಟ್ಟಿ ಅಂತಿಮವಾಗಿ ವರ್ಷವಾಗಿದ್ರೂ ಇನ್ನೂ ಹಕ್ಕು ಪತ್ರ ನೀಡಿಲ್ಲ.‌ ಈಗ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪರೋಕ್ಷವಾಗಿ ಒಬ್ಬೊಬ್ಬ ಫಲಾನುಭವಿಯಿಂದ 10 ಸಾವಿರ‌ ಲಂಚದ ಬೇಡಿಕೆಯಿಟ್ಟಿದ್ದಾರೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ. ಇನ್ನು ಸಮಾಜ ಕಲ್ಯಾಣ ಇಲಾಖೆಗೆ ಫಲಾನುಭವಿಗಳನ್ನು ಗುರುತಿಸೋ ಕೆಲಸ ನೀಡಲಾಗಿದ್ದು, ವರ್ಷದ ಹಿಂದೆಯೇ ಫಲಾನುಭವಿಗಳ ಪಟ್ಟಿ ತಯಾರು ಮಾಡಿಲಾಗಿದೆ. ಅದರಂತೆ ಸರ್ವೇ ಇಲಾಖೆ ಸಿಬ್ಬಂದಿಗಳೂ ಸಹ ಬಂದು ಸರ್ವೇ ನಡೆಸಿ, ಪ್ರತಿಯೊಬ್ಬ ಫಲಾನುಭವಿಗಳ ಜಮೀನಿನ ಗಡಿ ಗುರುತು ಮಾಡಿದ್ದಾರೆ. ಆದ್ರೆ ಅಧಿಕಾರಿಗಳು‌ ನೇರವಾಗಿ ಹಣ ಕೇಳೋಕ್ಕಾಗದೆ, ಇಲ್ಲಸಲ್ಲದ ಸಬೂಬು ಹೇಳುತ್ತಾ, ಮತ್ತೊಮ್ಮೆ ಫಲಾನುಭವಿಗಳ ಪಟ್ಟಿ‌ ಪರಿಶೀಲಿಸಬೇಕೆನ್ನೋ ಕಾರಣ ನೀಡ್ತಿದ್ದಾರೆ.

ಇನ್ನು ಸರ್ವೇ ಮಾಡೋಕೆ ಬಂದ ಸಿಬ್ಬಂದಿಯೂ ಸಹ ಪ್ರತಿಯೊಬ್ಬ ಫಲಾನುಭವಿಯಿಂದ ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ರಂತೆ. ಈ ಸಂಬಂಧ ಹಕ್ಕುಪತ್ರ ಹಂಚೋ ಜವಾಬ್ದಾರಿ ಹೊತ್ತಿರೋ ಸಮಾಜ‌ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಖಾಜಾಹುಸೇನ್‌ ಮುಧೋಳ ಅವರನ್ನು‌ ಕೇಳಿದ್ರೆ, ಕೇಳೋ ಪ್ರತಿಯೊಂದು ಪ್ರಶ್ನೆಗೂ ತಡಬಡಾಯಿಸ್ತಾ ಉತ್ತರಿಸ್ತಾರೆ. ಇದನ್ನು ನೋಡಿಯೇ ಇವರ ಇಲಾಖೆಯಲ್ಲಿ ತಪ್ಪಾಗಿದೆ ಎನ್ನೋದು ಸ್ಪಷ್ಟವಾಗುತ್ತೆ.

ಒಟ್ಟಿನಲ್ಲಿ ದೇವರು ವರ ಕೊಟ್ರೂ ಪೂಜಾರಿ ವರ‌ ಕೊಡ್ಲಿಲ್ಲ ಎನ್ನೋ ಹಾಗಾಗಿದೆ ಡೋಣಿ ಗ್ರಾಮದ ಬಗರ್ ಹುಕುಂ ಸಾಗುವಳಿದಾರರ ಸ್ಥಿತಿ. ಅಧಿಕಾರಿಗಳ ಹಣದಾಹಕ್ಕೆ ಹಿರಿಯರ ಕಾಲದಿಂದಲೂ ಸಾಗುವಳಿ ಮಾಡಿಕೊಂಡು ಬಂದ ಜಮೀನು ಕೈತಪ್ಪೋ ಭೀತಿಯಲ್ಲಿ ಬಗರ್ ಹುಕುಂ ಸಾಗುವಳಿದಾರರಿದ್ದಾರೆ. ಕೂಡ್ಲೇ ಗದಗ ಜಿಲ್ಲಾಡಳಿತ ಈಗಾಗಿರೋ ತಪ್ಪನ್ನು ಸರಿಪಡಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕೆನ್ನೋ ಆಗ್ರಹ ಆ ಭಾಗದಲ್ಲಿ ಕೇಳಿಬರ್ತಿದೆ...

ABOUT THE AUTHOR

...view details