ಗದಗ: ಇಂಧನ ಬೆಲೆ ಗಗನಕ್ಕೇರುತ್ತಿರುವ ನಡುವೆ ವಾಹನ ಸವಾರರ ಪಾಡು ಹೇಳತಿರದ್ದಾಗಿದೆ. ಆದರೆ ಈ ಇಂಧನ ಬೆಲೆ ಏರಿಕೆಗೆ ಕಡಿವಾಣಕ್ಕೆ ಗದಗದಲ್ಲಿ ಬೇವಿನ ಬೀಜದಿಂದ ಡೀಸೆಲ್ ತಯಾರಿಸಿ ಯಶಸ್ವಿಯಾಗಿದ್ದಾರೆ.
ಗದಗ ನಗರದ ನಾಗಾವಿ ಗುಡ್ಡದಲ್ಲಿರೋ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿವಿಯಿಂದ ಹೊಸ ಪ್ರಯತ್ನವೊಂದು ಆರಂಭವಾಗಿದೆ. ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಅಂಗವಾಗಿ ವಿವಿಯಲ್ಲಿ ಈ ಘಟಕ ಆರಂಭಿಸಲಾಗಿದೆ. ಕರ್ನಾಟಕ ರಾಜ್ಯ ಜೈವಿಕ ಇಂಧನ ಮಂಡಳಿಯ ಸಹಯೋಗದಲ್ಲಿ ಆರಂಭವಾದ ಈ ಘಟಕ ಮುಂದಿನ ದಿನಗಳಲ್ಲಿ ಆಮದು ಮೇಲಿನ ಒತ್ತಡ ಕಡಿಮೆ ಮಾಡಿ ಸ್ವಾವಲಂಬಿಯಾಗಿ ಇಂಧನ ಕೊರತೆ ನೀಗಿಸುವ ಪ್ರಯತ್ನ ಮಾಡಲಾಗ್ತಿದೆ.
1 ಲೀಟರ್ ಡೀಸೆಲ್ ತಯಾರಿಕೆಗೆ 4 ಕೆ.ಜಿ ಬೇವಿನ ಬೀಜ ಬಳಕೆ
ಮುಖ್ಯವಾಗಿ ನೈಸರ್ಗಿಕವಾಗಿ ಸಿಗುವ ಬೇವಿನ ಬೀಜದ ಜೊತೆ ಹೊಂಗೆ ಬೀಜ, ಹಿಪ್ಪೆ, ಸೀಮರೂಬ ಮತ್ತು ಜಟ್ರೋಪ (ಕಳ್ಳಿ) ಬೀಜಗಳಿಂದ ಬಯೋ ಡೀಸೆಲ್ ತಯಾರಿಸಲಾಗ್ತಿದೆ. ಒಂದು ಲೀಟರ್ ಡೀಸೆಲ್ ಉತ್ಪಾದನೆಗೆ 4 ಕೆ.ಜಿ ಬೀಜ ಬೇಕಾಗುತ್ತದೆ. ಈ ಬೀಜಗಳನ್ನು ಮಷಿನ್ಗಳಲ್ಲಿ ರುಬ್ಬಿ ಅದರಿಂದ ಬರುವ ರಸವನ್ನು ಸಂಸ್ಕರಣೆ ಮಾಡಿ ಇಂಧನವಾಗಿ ಪರಿವರ್ತನೆ ಮಾಡಲಾಗ್ತಿದೆ. ಇಲ್ಲಿ ಡೀಸೆಲ್ ಜೊತೆಗೆ ಉಳಿದ ವೇಸ್ಟೇಜ್ ಅನ್ನು ಜೈವಿಕ ಗೊಬ್ಬರವಾಗಿ, ವೇಸ್ಟೇಜ್ ನೀರನ್ನು ಪಿನಾಯಿಲ್ ಆಗಿ ಮತ್ತು ಸಾಬೂನು ತಯಾರಿಕೆಯಲ್ಲಿ ಬಳಕೆ ಮಾಡಲಾಗ್ತಿದೆ.