ಗದಗ: ಪಂಚಮಸಾಲಿ 2ಎ ಮೀಸಲಾತಿ ವಿವಾದ ದಿನಕ್ಕೊಂದು ತಿರುವನ್ನು ಪಡೆದು ಕೊಳ್ಳುತ್ತಿದೆ. ಜೊತೆಗೆ ಇದೇ ವಿಚಾರದಲ್ಲಿ ಹಲವು ವಿವಾದಾತ್ಮಕ ವಿಷಯಗಳು ಹುಟ್ಟಿಕೊಳುತ್ತಿದ್ದು, ಇದೀಗ ಹೊಸದೊಂದು ವಿವಾದ ಸೃಷ್ಟಿಯಾಗಿದೆ.
ಮಠದ ಟ್ರಸ್ಟಿ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ ಮಾತನಾಡಿದರು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲ ಸಂಗಮದ ಪಂಚಮಸಾಲಿ ಪೀಠದ ಆಸ್ತಿ ವಿವಾದ ಈಗ ಪಂಚಮಸಾಲಿ ಸಮಾಜದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮಠದ ಆಸ್ತಿಯನ್ನೇ ವೈಯಕ್ತಿಕವಾಗಿ ಬಳಸಿಕೊಳ್ಳಲು ಶ್ರೀಗಳೇ ಆಸೆ ಪಟ್ಟಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಇದೇ ವಿಚಾರ ಈಗ ಮಠದ ಟ್ರಸ್ಟಿ ಮತ್ತು ಸ್ವಾಮೀಜಿಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.
ಮಠದ ಆಸ್ತಿ ವೈಯಕ್ತಿಕವಾಗಿ ತಮಗೆ ಬಿಟ್ಟು ಕೊಡುವಂತೆ ಶ್ರೀಗಳು ಕೇಳಿದ್ದಾರೆಂದು ಪಂಚಮಸಾಲಿ ಪೀಠದ ಟ್ರಸ್ಟ್ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ ಗಂಭೀರ ಆರೋಪ ಮಾಡಿದ್ದಾರೆ. ಮಠಕ್ಕೆ ಸೇರಿದ್ದ ಸುಮಾರು 6 ಎಕರೆ ಜಮೀನನ ಪೈಕಿ 2 ಎಕರೆ ಟ್ರಸ್ಟ್ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿಯವರ ಹೆಸರಿನಲ್ಲಿದೆ. ಆ 2 ಎಕರೆ ಜಮೀನನ್ನು ತಮ್ಮ ವೈಯಕ್ತಿಕ ಕೆಲಸಕ್ಕೆ ಬಿಟ್ಟು ಕೊಡುವಂತೆ ಮಠದ ಪೀಠಾಧಿಪತಿ ಜಯಮೃತ್ಯುಂಜಯ ಸ್ವಾಮೀಜಿಗಳು ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆಂದು ಟ್ರಸ್ಟ್ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಗದಗನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಹೆಸರಿನಲ್ಲಿರುವ ಮಠದ ಆಸ್ತಿಯನ್ನು ಶ್ರೀಗಳು ಕೇಳಿದ್ದಾರೆ. ಆದರೆ ಅದು ಮಠದ ಟ್ರಸ್ಟ್‌ಗೆ ಸೇರಿದ್ದು. ಇದನ್ನು ಶ್ರೀಗಳ ಹೆಸರಿಗೆ ಬಿಟ್ಟು ಕೊಡಲು ಬರುವುದಿಲ್ಲ. ಹೀಗಾಗಿ ನಾನು ವೈಯಕ್ತಿಕವಾಗಿ ನಿಮಗೆ ಬಿಟ್ಟುಕೊಡುವುದಿಲ್ಲ ಬದಲಾಗಿ ಟ್ರಸ್ಟ್‌ಗೆ ಬಿಟ್ಟುಕೊಡುತ್ತೇನೆ ಎಂದಿದ್ದೆ. ಇದೇ ವಿಚಾರಕ್ಕೆ ಈಗ ನನ್ನ ಮೇಲೆ ಷಡ್ಯಂತ್ರ ರೂಪಿಸಿದ್ದಾರೆ ಅಂತ ಹುಣಸಿಕಟ್ಟಿ ಹೇಳಿದ್ದಾರೆ.
ಇನ್ನು, ರಾಜಕೀಯ ನಾಯಕರ ಕಿತ್ತಾಟದಲ್ಲಿ ನಾನು ಬಲಿಪಶುಯಾಗುತ್ತಿದ್ದೇನೆ. ಆಸ್ತಿಯನ್ನು ಟ್ರಸ್ಟ್ ಹೆಸರಿಗೆ ಬಿಟ್ಟು ಕೊಡ್ತೇನೆ ಅಂತ ಹಿಂದೆಯೇ ಸಾವಿರ ಬಾರಿ ಹೇಳಿದ್ದೇನೆ. ಈಗ ಆರೋಪ ಮಾಡುವ ವಿಜಯಾನಂದ ಕಾಶಪ್ಪನವರಿಗೂ ಹೇಳಿದ್ದೇನೆ. ಆದರೆ ಯಾವ ರಾಜಕೀಯ ನಾಯಕನೂ ಕೇಳಿಸಿಕೊಳ್ಳಲಿಲ್ಲ. ಅದೆಲ್ಲಿ ಹೋಗುತ್ತೆ ಇರಲಿ ಬಿಡಿ ಅಂತ ಕಾಶಪ್ಪನವರೇ ಹೇಳಿದ್ದಾರೆ. ಈಗ ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಅಂತ ಕಿಡಿಕಾರಿದರು.
ಹುಣಸಿಕಟ್ಟಿ ವಿರುದ್ಧ ಯತ್ನಾಳ್, ಕಾಶಪ್ಪನವರ್ ಆರೋಪವೇನು?
ಇದೇ ವಿಚಾರವಾಗಿ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಟ್ರಸ್ಟ್ ಅಧ್ಯಕ್ಷ ಪ್ರಬಣ್ಣ ಹುಣಸಿಕಟ್ಟಿ ಮೇಲೆ ಮುಗಿಬಿದ್ದಿದ್ದರು. ಮಠದ ಆಸ್ತಿಯನ್ನು ಖಾಸಗಿಯಾಗಿ ಬಳಕೆ ಮಾಡಿಕೊಂಡಿದ್ದಾರೆಂದು ಪ್ರಭಣ್ಣ ಹುಣಸಿಕಟ್ಟಿ ಮೇಲೆ ಹೋದಲ್ಲಿ, ಬಂದಲ್ಲಿ ಯತ್ನಾಳ್ ಹಾಗೂ ಕಾಶಪ್ಪನವರ್ ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ. ಕಳೆದ ಸೆ.26 ರಂದು ಗದಗನಲ್ಲಿ ಆಯೋಜಿಸಿದ್ದ ಪಂಚಮಸಾಲಿ ಪಂಚಾಯತ್ ಅಭಿಯಾನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾಜಿ ಶಾಸಕ ಮತ್ತು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾಗಿರುವ ವಿಜಯಾನಂದ ಕಾಶಪ್ಪನರ್ ಪ್ರಭಣ್ಣ ಅವರ ಮೇಲೆ ಹರಿಹಾಯ್ದಿದ್ದರು. ಹತ್ತು ವರ್ಷಗಳಿಂದ ಮಠದ ಆಸ್ತಿಯನ್ನು ವೈಯಕ್ತಿಕ ಹೆಸರಲ್ಲಿ ಇಟ್ಟುಕೊಂಡಿದ್ದಾರೆ. ನೂರಾರು ಬಾರಿ ಆಸ್ತಿಯನ್ನು ಬಿಟ್ಟು ಕೊಡುವಂತೆ ಕೇಳಿದರೂ ಬಿಟ್ಟುಕೊಟ್ಟಿಲ್ಲ ಅಂತ ಕಿಡಿಕಾರಿದ್ದರು.
ಕೂಡಲ ಸಂಗಮ ಪಂಚಮಸಾಲಿ ಪೀಠದ ಆಸ್ತಿ ವಿವಾದದ ಬಗ್ಗೆ ವಿಜಯಾನಂದ ಕಾಶಪ್ಪನವರ್ ಮಾತನಾಡಿದರು ಮಠದ ಆಸ್ತಿಯನ್ನು ತಮ್ಮ ವೈಯಕ್ತಿಕ ಹೆಸರಿಗೆ ಇಟ್ಟುಕೊಂಡಿದ್ದಕ್ಕೆ ಅಂದಿನ ದಿನದಲ್ಲಿ ಕೆಲವು ತಾಂತ್ರಿಕ ಅಡಚಣೆಗಳಿದ್ದಿದ್ದಕ್ಕೆ ನನ್ನ ಹೆಸರಿಗೆ ಮಾಡಲಾಗಿತ್ತು. ಅದು ಈಗ ಆರೋಪ
ಮಾಡುವ ಎಲ್ಲಾ ರಾಜಕೀಯ ನಾಯಕರಿಗೂ ಗೊತ್ತಿದೆ. ಆದರೆ ಈ ರಾಜಕೀಯ ನಾಯಕರ ತಿಕ್ಕಾಟದಲ್ಲಿ ನನ್ನ ಮಾತ್ರ ಬಲಿಪಶು ಮಾಡ್ತಿದ್ದಾರೆ. ಆದರೆ ಯಾವತ್ತಿದ್ದರೂ ಅದು ಮಠದ ಆಸ್ತಿ. ಮಠಕ್ಕೆ ಬಿಟ್ಟುಕೊಡ್ತೇನೆ. ಆದ್ರೆ ಶ್ರೀಗಳಿಗೆ ಬಿಟ್ಟುಕೊಡೋದಿಲ್ಲಾ ಅಂತ ಮಠದ ಟ್ರಸ್ಟ್ ಅಧ್ಯಕ್ಷ ಹುಣಸಿಕಟ್ಟಿ ಹೇಳ್ತಿದ್ದಾರೆ. ಸದ್ಯ ಈ ವಿಚಾರ ಶ್ರೀಗಳಿಗೆ ತಿರುಗುಬಾಣವಾಗಿ ಮಾರ್ಪಟ್ಟಿದೆ. ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.