ಗದಗ: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಆಯ್ಕೆ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿತ್ತು. ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ - ಬಿಜೆಪಿ ಹೆಣಗಾಡಿದ್ದು, ಕೊನೆಗೂ ದಶಕಗಳ ಬಳಿಕ ಬಿಜೆಪಿ ಗದಗ - ಬೆಟಗೇರಿ ನಗರಸಭೆ ಅಧಿಕಾರದ ಗದ್ದುಗೆ ಏರಿತು. ಆದರೆ, ಬಿಜೆಪಿ ಸಂಸದರು ಮಾಡಿದ ಮಹಾ ಯಡವಟ್ಟು ಮತ್ತೆ ಬಿಜೆಪಿ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.
ಗದಗ-ಬೆಟಗೇರಿ ನಗರಸಭೆ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್-ಬಿಜೆಪಿ ನಡುವೆ ತೀವ್ರ ಪೈಪೊಟಿ ಏರ್ಪಟ್ಟಿತ್ತು. 18 ಸದಸ್ಯರ ಬಲ ಹೊಂದಿದ್ದ ಬಿಜೆಪಿ ಓರ್ವ ಸಂಸದರ ಬೆಂಬಲದೊಂದಿಗೆ ಸುಲಭವಾಗಿ ಅಧಿಕಾರದ ಗದ್ದುಗೆ ಏರುವ ಪ್ಲಾನ್ ಮಾಡಿತ್ತು. ಆದರೆ, ಕಾಂಗ್ರೆಸ್ ಇಬ್ಬರು ಪಕ್ಷೇತರ ಬೆಂಬಲದೊಂದಿಗೆ ಓರ್ವ ಶಾಸಕರ ಮತದ ಜೊತೆಗೆ ವಿಧಾನ ಪರಿಷತ ಸದಸ್ಯರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳು ಪ್ಲಾನ್ ಮಾಡಿತ್ತು.
ಇದು ಬಿಜೆಪಿ ಪಕ್ಷಕ್ಕೆ ತೀವ್ರ ತಲೆ ನೋವಾಗಿತ್ತು. ಕೊನೆ ಗಳಿಗೆಯಲ್ಲಿ ವಿಧಾನ ಪರಿಷತ ಸದಸ್ಯರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲಿಲ್ಲ. ಹಾಗಾಗಿ, ನಗರಸಭೆ ಅಧ್ಯಕ್ಷ, ಉಪಾದ್ಯಕ್ಷ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಉಷಾ ದಾಸರ, ಉಪಾಧ್ಯಕ್ಷ ಸ್ಥಾನಕ್ಕೆ ಸುನಂದಾ ಬಾಕಳೆ ನಾಮಪತ್ರ ಸಲ್ಲಿಸಿದ್ರು. ಕಾಂಗ್ರೆಸ್ ಪರ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಚಂದಾವರಿ, ಉಪಾಧ್ಯಕ್ಷ ಸ್ಥಾನಕ್ಕೆ ಶಕುಂತಲಾ ಅಕ್ಕಿ ನಾಮಪತ್ರ ಸಲ್ಲಿಸಿದ್ರು. ಚುನಾವಣೆ ನಡೆದು ಕೊನೆಗೆ ಬಿಜೆಪಿ 19 ಸದಸ್ಯರ ಬಲದೊಂದಿಗೆ ನಗರಸಭೆ ಅಧಿಕಾರದ ಗದ್ದುಗೆ ಏರಿತು. ಆದರೆ, ಬಿಜೆಪಿ ಸಂಸದ ಶಿವಕುಮಾರ ಮಾಡಿದ ಸಹಿ ಎಡವಟ್ಟಿನಿಂದ ಇಡೀ ಚುನಾವಣೆ ಗೊಂದಲದ ಗೂಡಾಗಿತ್ತು.
ಕಾಂಗ್ರೆಸ್ ಅಧ್ಯಕ್ಷ ಅಭ್ಯರ್ಥಿ ಲಕ್ಷ್ಮಣ ಚಂದಾವರಿ ಪರ 19 ಸಹಿ ಆಗಿದೆ. ನನ್ನ ಅಧ್ಯಕ್ಷನಾಗಿ ಘೋಷಣೆ ಮಾಡಿ ಒತಾಯಿಸಿದರು. ಆದರೆ, ಚುನಾವಣೆ ಅಧಿಕಾರಿಯಾದ ಎಸಿ ರಾಯಪ್ಪ ಹುಣಸಗಿ 19 ಜನ ಸದಸ್ಯರು ಬಿಜೆಪಿಯ ಉಷಾ ದಾಸರ ಪರ ಇದ್ದಾರೆ ಅಂತ ಬಿಜೆಪಿ ಸದ್ಯಸ್ಯೆ ಉಷಾ ದಾಸರ ಅಧ್ಯಕ್ಷೆ, ಸುನಂದಾ ಬಾಕಳೆ ಉಪಾಧ್ಯಕ್ಷೆ ಅಂತ ಘೋಷಣೆ ಮಾಡಿದ್ರು. ಇದನ್ನ ಪ್ರಶ್ನಿಸಿ ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಚಂದಾವರಿ ಹಾಗೂ ಸದಸ್ಯರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ರು.