ಗದಗ:ಹಿಂದೂಸ್ತಾನಿ ಸಂಗೀತದಲ್ಲಿ ಮೊದಲ ಭಾರತ ರತ್ನ ಪ್ರಶಸ್ತಿ ಪಡೆದ ದಿ. ಪಂಡಿತ ಭೀಮಸೇನ ಜೋಷಿ ಅವರಿಗೆ 100ನೇ ವರ್ಷದ ಜನ್ಮ ದಿನ. ಈ ಹಿನ್ನೆಲೆಯಲ್ಲಿ ಪುಣೆಯ ಕಾಣೆಬೂವಾ ಪ್ರತಿಷ್ಠಾನ ವತಿಯಿಂದ ಒಂದು ವರ್ಷ ಕಾಲ ನಿರಂತರವಾಗಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಾಗಾಗಿ ಅವರ ಹುಟ್ಟೂರು ಗದಗ ಜಿಲ್ಲೆಯಲ್ಲಿ ಮೊದಲ ರಾಷ್ಟ್ರೀಯ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಗದಗನ ಪ್ರಖ್ಯಾತ ವೀರ ನಾರಾಯಣ ದೇವಸ್ಥಾನ ಆವರಣದಲ್ಲಿ ಜನ್ಮಶತಾಬ್ಧಿ ಅಂಗವಾಗಿ ರಾಷ್ಟ್ರೀಯ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಜರುಗಿತು. ಜಿಲ್ಲೆಯಲ್ಲಿ ಆರಂಭವಾಗಿ ಇಡೀ ದೇಶಾದ್ಯಂತ ಪಂಡಿತ ಭೀಮಸೇನ ಜೋಷಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಸಂಗೀತ ಕಾರ್ಯಕ್ರಮ ನಡೆಸಿ, 2022 ರ ಫೆ.4 ರಂದು ಗದಗದಲ್ಲಿಯೇ ಸಮಾರೋಪಗೊಳ್ಳಲಿದೆ. ಇಲ್ಲಿ ಮೊದಲ ಸಂಗೀತ ಕಾರ್ಯಕ್ರಮಕ್ಕೆ ಹಿಂದೂಸ್ತಾನಿ ಸಂಗೀತ ಗಾಯಕ ಪದ್ಮಶ್ರೀ ಪಂಡಿತ ವೆಂಕಟೇಶ ಕುಮಾರ ಅವರು ಚಾಲನೆ ನೀಡಿದರು. ಈ ವೇಳೆ ಭೀಮಸೇನ ಜೋಷಿ ಅವರ ಕುಟುಂಬಸ್ಥರಾದ ಸುಶಲೇಂದ್ರ ಜೋಷಿ ಸೇರಿದಂತೆ ಹಲವರು ಭಾಗಿಯಾಗಿದ್ದರು.