ಗದಗ:ಕೊರೊನಾ ನಿಯಂತ್ರಿಸಲು ಲಾಕ್ಡೌನ್ ಆದೇಶ ಹೊರಡಿಸಿದ್ರೂ ಜನ ಅದನ್ನು ಉಲ್ಲಂಘಿಸಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಇದನ್ನು ತಡೆಯಲು ಗ್ರಾಮ ಪಂಚಾಯ್ತಿ ಸದಸ್ಯರೇ ಸ್ವತಃ ಲಾಠಿ ಹಿಡಿದು ಗಸ್ತು ತಿರುಗುತ್ತಿದ್ದಾರೆ.
ಲಾಠಿ ಹಿಡಿದು ಗಸ್ತು ತಿರುಗುತ್ತಿರೋ ಗ್ರಾಪಂ ಸಿಬ್ಬಂದಿ... ಲಾಕ್ಡೌನ್ ಅಂದ್ರೆ ಇದಪ್ಪ - ಗದಗದಲ್ಲಿ ಲಾಕ್ಡೌನ್ ಉಲ್ಲಂಘನೆ
ಜನ ಯಾರೂ ಹೊರಬರದಂತೆ ತಡೆಯಲು ಗದಗ ಜಿಲ್ಲೆಯ ಬೆಳ್ಳಟ್ಟಿಯಲ್ಲಿ ಗ್ರಾಪಂ ಸದಸ್ಯರೇ ಸ್ವತಃ ಲಾಠಿ ಹಿಡಿದು ಊರಿನಲ್ಲಿ ಗಸ್ತು ತಿರುಗುತ್ತಿದ್ದಾರೆ.
ಪರಿಣಾಮ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬೆಳ್ಳಟ್ಟಿಯಲ್ಲಿ ಇಡೀ ಊರಿಗೆ ಊರೇ ಸ್ತಬ್ಧವಾಗಿದೆ. ಒಂದು ನರಪಿಳ್ಳೆಯೂ ಸಹ ಹೊರಗಡೆ ಕಾಣಸಿಗದಂತೆ ಬಿಕೋ ಅನ್ನುತ್ತಿದೆ. ಬೆಳ್ಳಟ್ಟಿ ಗ್ರಾಮ ಪಂಚಾಯ್ತಿಯ ಸದಸ್ಯರು, ಪಿಡಿಒ, ಉಳಿದ ಸಿಬ್ಬಂದಿ ಲಾಕ್ಡೌನ್ ಅನ್ನು ಯಶಸ್ವಿಗೊಳಿಸಲು ಸರಕಾರದ ಕ್ರಮಕ್ಕೆ ಸಹಕರಿಸಲು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ತಾವೇ ಸ್ವಯಂ ಪ್ರೇರಣೆಯಿಂದ ಗ್ರಾಮದ ಜನರು ಹೊರಗಡೆ ಬರದಂತೆ, ಜನಜಂಗುಳಿ ಸೇರಿದಂತೆ ಜಾಗೃತಿ ವಹಿಸಿದ್ದಾರೆ.
ಸಿಬ್ಬಂದಿ ಲಾಠಿ ಹಿಡಿದು ಗ್ರಾಮದಲ್ಲಿ ಗಸ್ತು ತಿರುಗುತ್ತಿದ್ದಾರೆ. ಇನ್ನು ಇಡೀ ಗ್ರಾಮವನ್ನೇ ಲಾಕ್ ಡೌನ್ ಮಾಡಿದ್ದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ. ಯಾವುದೇ ವ್ಯಾಪಾರ ವಹಿವಾಟು ಮಾಡದಂತೆ ನೋಡಿಕೊಂಡಿದ್ದಾರೆ. ಇನ್ನು ಗ್ರಾಮಕ್ಕೆ ಬರುವವರನ್ನು ಸಹ ಗ್ರಾಮದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿ ಬಳಿಕ ಅವರನ್ನ 2 ದಿನ ಹೋಂ ಕ್ವಾರಂಟೈನ್ ನಲ್ಲಿ ಇಡುವ ವ್ಯವಸ್ಥೆ ಮಾಡಿದ್ದಾರೆ. ಈ ಕಾರ್ಯಕ್ಕೆ ಆಶಾ ಕಾರ್ಯಕರ್ತೆಯರ ಸಹಾಯ ಪಡೆದುಕೊಂಡಿದ್ದಾರೆ.