ಗದಗ:ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಪ್ರವಾಹದ ಭೀತಿ ಇದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿರಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸೂಚಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಸಚಿವ ಸಿ.ಸಿ. ಪಾಟೀಲ್ ಸೂಚನೆ ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಣ ಹಾಗೂ ಪ್ರವಾಹ ಮುನ್ನೆಚ್ಚರಿಕೆ ಕುರಿತು ಜರುಗಿದ ವಿಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಮಲಪ್ರಭಾ ನದಿ ಪಾತ್ರದ ಹಾಗೂ ಬೆಣ್ಣೆಹಳ್ಳ ಪಾತ್ರದ ಜಿಲ್ಲೆಯ ಪ್ರದೇಶಗಳಲ್ಲಿ ಪ್ರವಾಹ ಎದುರಾಗಬಹುದು. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.
ಇನ್ನು ಪ್ರವಾಹ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೇಂದ್ರಗಳಿಗಾಗಿ ಸ್ಥಳಗಳನ್ನು ಗುರುತಿಸಲು ಸೂಚಿಸಿ, ಮೂಲಭೂತ ಸೌಕರ್ಯ ಹಾಗೂ ವೈದ್ಯಕೀಯ ಉಪಚಾರ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಮಾತನಾಡಿ, ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳ ಅಚ್ಚುಕಟ್ಟು ಪ್ರದೇಶದ ಪ್ರವಾಹಕ್ಕೊಳಗಾಗಬಹುದಾದ ರೋಣ ಹಾಗೂ ನರಗುಂದ ತಾಲೂಕಿನ ತಲಾ 16 ಗ್ರಾಮಗಳನ್ನು ಗುರುತಿಸಲಾಗಿದೆ. ತುಂಗಭದ್ರಾ ನದಿ ಅಚ್ಚುಕಟ್ಟು ಪ್ರದೇಶದ ಪ್ರವಾಹಕ್ಕೊಳಗಾಗುವ ಶಿರಹಟ್ಟಿ ತಾಲೂಕಿನ 10 ಗ್ರಾಮ ಹಾಗೂ ಮುಂಡರಗಿ ತಾಲೂಕಿನ 11 ಗ್ರಾಮಗಳನ್ನು ಗುರುತಿಸಲಾಗಿದೆ. ಅಗತ್ಯಕ್ಕನುಸಾರವಾಗಿ ಪರಿಹಾರ ಕೇಂದ್ರಗಳನ್ನು ತಾಲೂಕುವಾರು ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂವಾದದಲ್ಲಿ ತಿಳಿಸಿದ್ದಾರೆ.
ಸಂವಾದದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.