ಗದಗ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಅಧಿಕ ಪ್ರಮಾಣದ ಬೆಳೆ, ಮನೆ, ಸರ್ಕಾರಿ ಆಸ್ತಿ ಹಾನಿಗೊಳಗಾಗಿದೆ. ಹಾನಿಯ ಪ್ರಮಾಣವನ್ನು 811.26 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಈ ಕುರಿತ ಸಮೀಕ್ಷಾ ಕಾರ್ಯ ಇನ್ನೂ ಪ್ರಗತಿಯಲ್ಲಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಸಚಿವರು, ಕಳೆದ ತಿಂಗಳು ಜಿಲ್ಲೆಗೆ ಆಗಮಿಸಿದಾಗ ಜಿಲ್ಲೆಯಲ್ಲಿ 93 ಸಾವಿರ ಹೆಕ್ಟೇರ್ ಕೃಷಿ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಯಾಗಿದೆ ಎಂದು ವರದಿಯಾಗಿತ್ತು. ಇದರಲ್ಲಿ 76 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆಗಳ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ನೋಂದಾಯಿಸಲಾಗಿದೆ. ಸೆಪ್ಟೆಂಬರ್ 12 ರ ನಂತರ ಪರಿಹಾರ ಮೊತ್ತವನ್ನು ಅರ್ಹರಿಗೆ ನೀಡಲು ಮುಖ್ಯ ಮಂತ್ರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ 7 ಜೀವ ಹಾನಿ ಸಂಭವಿಸಿದೆ. ಇದರಲ್ಲಿ 4 ಕುಟುಂಬಗಳಿಗೆ ತಲಾ 5 ಲಕ್ಷ ರೂ.ಯಂತೆ ಪರಿಹಾರ ವಿತರಿಸಲಾಗಿದೆ. ಒಟ್ಟು 59 ಜಾನುವಾರುಗಳ ಜೀವಹಾನಿ, 1,601 ಮನೆಗಳಿಗೆ ಹಾನಿಯಾಗಿದ್ದು 655 ಮನೆಗಳಿಗೆ ಮಾರ್ಗಸೂಚಿಗಳನ್ವಯ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.