ಗದಗ:ಹಿಂದೂ ಮಹಾಗಣಪತಿ ಧರ್ಮಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯವೈಖರಿಯನ್ನು ಟೀಕಿಸಿದರು. ಇದೇ ವೇಳೆ ತಾವು ಸಿಎಂ ಆದ್ರೆ, ಬದಲಾವಣೆ ಆಗುತ್ತದೆ ಎನ್ನುವ ಮೂಲಕ ಸಿಎಂ ಆಗುವ ಆಸೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದರು. ಇದೇ ವೇಳೆ ಸ್ವಪಕ್ಷೀಯ ನಾಯಕರ ವಿರುದ್ಧವೂ ಪರೋಕ್ಷ ಟೀಕಾಪ್ರಹಾರ ನಡೆಸಿದ್ದಾರೆ.
ಸಿಎಂ ವಿರುದ್ಧ ಚಾಟಿ ಬೀಸಿದ ಯತ್ನಾಳ್:ಉತ್ತರ ಪ್ರದೇಶ ಮಾದರಿಯಲ್ಲಿ ಬುಲ್ಡೋಜರ್ ಪ್ರಯೋಗಿಸಿ ಅಂದ್ರೆ ನಮ್ಮಲ್ಲಿ ಸಾಧ್ಯವಿಲ್ಲ ಎನ್ನುತ್ತಾರೆ. ಸಾಧ್ಯವಿಲ್ಲ ಅಂದ್ರೆ ಯಾತಕ್ಕಿದ್ದೀರಿ?. ಮನೆಗೆ ಹೋಗ್ರಿ ಎಂದರು. ಹಾಡಹಗಲೇ ಹಿಂದೂಗಳನ್ನು ಹೊಡೀತಾರೆ. ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್ಗೆ ಬೆಂಕಿ ಹಚ್ಚಿದ್ರು. ಪೊಲೀಸರ ಕೈಯಲ್ಲಿ ಬಂದೂಕು ಕೊಟ್ಟಿದ್ದೀರಿ. ಆದ್ರೆ, ಹೊಡೀಬೇಡಿ ಎಂದಿದ್ದೀರಿ. ನಾನು ಮುಖ್ಯಮಂತ್ರಿ ಆಗಿದ್ರೆ, ಮೊದಲು ಹೊಡೀರಿ ಅಂತಿದ್ದೆ. ಹೊಡೆದವರಿಗೆ ಪ್ರಮೋಷನ್ ಕೊಡ್ತಿದ್ದೆ. ಪಿಸಿ ಇದ್ದವನನ್ನು ಎಎಸ್ಐ, ಪಿಎಸ್ಐ ಆಗಿದ್ದವನನ್ನು ಸಿಪಿಐ ಮಾಡುತ್ತಿದ್ದೆ. ಅಲ್ಲದೇ ಕರ್ನಾಟಕದ ತುಂಬಾ ಎನ್‌ಕೌಂಟರ್ ಸ್ಪೆಷಲಿಸ್ಟ್ಗಳನ್ನು ಇಡುತ್ತಿದ್ದೆ ಎಂದು ಯತ್ನಾಳ್ ಗುಡುಗಿದರು.
ಒಬ್ರನ್ನು ಜೈಲಿಗೆ, ಇನ್ನೊಬ್ರನ್ನು ಕಾಡಿಗೆ ಕಳುಹಿಸುವೆ: ನಾನು ಮತ್ತೊಬ್ಬ ಯೋಗಿ ಬಾಬಾ ಆಗುತ್ತೇನೆ ಅನ್ನೋ ಭಯ ಅವರಿಗಿದೆ. ಹೀಗೆ ಹೇಳುವ ಮೂಲಕ ಹೆಸರು ಪ್ರಸ್ತಾಪಿಸಿದೆ ಸ್ವಪಕ್ಷದ ಕೆಲ ನಾಯಕರ ಬಗ್ಗೆ ಯತ್ನಾಳ್ ಅಸಮಾಧಾನ ಹೊರ ಹಾಕಿದ್ರು. ನಾನು ಅಪ್ಪಿ-ತಪ್ಪಿ ಮುಖ್ಯಮಂತ್ರಿ ಆದ್ರೆ, ಒಬ್ರನ್ನು ಜೈಲಿಗೆ, ಇನ್ನೊಬ್ಬರನ್ನು ಕಾಡಿಗೆ ಕಳುಹಿಸುತ್ತೇನೆ ಎಂದರು. ಮೊನ್ನೆ ಮಹಾರಾಷ್ಟ್ರದಲ್ಲಿ ಪೊಲೀಸರು ಡಿಜೆ ಎದುರು ಕುಣಿದಿದ್ದಾರೆ. ಮುಂದೆ ನಾನು ಮುಖ್ಯಮಂತ್ರಿಯಾದ್ರೆ ಎಲ್ಲರೂ ಕುಣಿಯೋಣ ಅಂತಾ ಹೇಳಿ, ಸಿಎಂ ಆಗುವ ಆಸೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದರು.