ಗದಗ:ರೈತ ಕುಟುಂಬವೊಂದರ ಬಾಳೆ ತೋಟವನ್ನು ದುಷ್ಕರ್ಮಿಗಳು ನಾಶ ಮಾಡಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವಡವಿ ಹೊಸೂರು ಗ್ರಾಮದಲ್ಲಿ ನಡೆದಿದೆ.
ವಡವಿ ಹೊಸೂರಿನ ಹಾಲೇಶ್ ಘಟರೆಡ್ಡಿಹಾಳ ಎಂಬ ಯುವ ರೈತ 2.5 ಎಕರೆ ಜಮೀನಿನಲ್ಲಿ ಸಮೃದ್ಧವಾಗಿ ಬಾಳೆಯನ್ನು ಬೆಳೆದಿದ್ದರು. ಇದೇ ಮೊದಲ ಬಾರಿಗೆ ಬಾಳೆ ಹಾಕಿ ಕೃಷಿ ಜೀವನ ಆರಂಭಿಸಿದ್ದರು. ಆದರೆ, ಯಾರೋ ದುಷ್ಕರ್ಮಿಗಳು ರಾತ್ರೋ ರಾತ್ರಿ ಬಾಳೆ ಬೆಳೆ ಜೊತೆಗೆ 2 ಲಕ್ಷ ಮೌಲ್ಯದ ಎರಡು ಬೋರ್ವೆಲ್ ಗಳನ್ನೂ ನಾಶಪಡಿಸಿದ್ದಾರೆ.
'ಎರಡೂವರೆ ಎಕರೆಯಲ್ಲಿ ಬಾಳೆ ಗಿಡವನ್ನು ಬೆಳೆಸಿದ್ದೆವು. ಅದರಲ್ಲಿ 2 ಎಕರೆಯನ್ನು ಕಡಿದು ನಾಶ ಮಾಡಿದ್ದಾರೆ. ಅಲ್ಲದೇ, ಎರಡು ಬೋರ್ವೆಲ್ಗಳಲ್ಲಿ ಒಂದರ ಮೇಲೆ ಕಲ್ಲನ್ನು ಎತ್ತಿ ಹಾಕಿದ್ದಾರೆ, ಇನ್ನೊಂದರ ಕೇಸಿಂಗ್ ವೈರ್ ಕಟ್ ಮಾಡಿ ಮೋಟಾರ್ ಅನ್ನು ನೀರಿಗೆ ಬಿಟ್ಟಿದ್ದಾರೆ. ಬಾಳೆಗೆ ಒಂದು ಎಕರೆಗೆ ಒಂದು ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದೆವು. ಬೆಳೆಗೆ ಒಟ್ಟು ಎರಡೂವರೆ ಲಕ್ಷ ಖರ್ಚಾಗಿದೆ.
ಬೋರ್ವೆಲ್ ಹಾಗೂ ಗೊಬ್ಬರ ಅಂತ ಸೇರಿ ಸರಿಸುಮಾರು 5 ಲಕ್ಷದವರೆಗೆ ಖರ್ಚಾಗಿದೆ. ಉಳಿದಿರುವ ಅರ್ಧ ಎಕರೆಯನ್ನು ಉಳಿಸಿಕೊಳ್ಳಬೇಕಾದ್ರೆ ನೀರು ಬೇಕೇ ಬೇಕು. ಇತ್ತ ಮಳೆಯೂ ಇಲ್ಲ' ಎಂದು ಜಮೀನಿನ ಮಾಲೀಕ ಹಾಲೇಶ್ ಘಟರೆಡ್ಡಿಹಾಳ ಅಳಲನ್ನು ತೋಡಿಕೊಂಡಿದ್ದಾರೆ.