ಗದಗ:ಹಿಂದೂ ದೇಗುಲಗಳಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆಅವಕಾಶ ನಿರ್ಬಂಧದ ಕುರಿತು ರಾಜ್ಯಾದ್ಯಂತ ಪರ-ವಿರೋಧ ಚರ್ಚೆ ಪ್ರಾರಂಭವಾಗಿದೆ. ಈ ವಿಚಾರವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದರು.ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪಿನ ನಂತರ ಇಂತಹ ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷದ ಮಾತು ಕೇಳಿ ಪ್ರತಿಭಟನೆ ಮಾಡಿರದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಹೈಕೋರ್ಟ್ ತೀರ್ಪಿನ ವಿರುದ್ಧ ನಡೆದುಕೊಂಡ ರೀತಿಯೇ ಇದಕ್ಕೆಲ್ಲ ಕಾರಣ ಎಂದರು.
ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಎಲ್ಲ ಧರ್ಮದವರು ಶಾಂತಿಯಿಂದ ಇರಬೇಕೆನ್ನುವುದು ಎಲ್ಲರಿಗೂ ಇದೆ. ಆದರೆ, ಹೈಕೋರ್ಟ್ ನಿರ್ಧಾರ ಬಂದ ನಂತರವೂ ಈ ರೀತಿಯ ಚಟುವಟಿಕೆಗಳನ್ನು ಯಾರೂ ಒಪ್ಪುವಂಥದ್ದಲ್ಲ. ಎಲ್ಲರೂ ಸಮಾಧಾನದಿಂದ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಕಾಂಗ್ರೆಸ್ ಪಕ್ಷದವರು ಹತಾಶರಾಗಿದ್ದಾರೆ. ಒಂದು ತಿಂಗಳಿನಿಂದ ಅಧಿಕಾರಕ್ಕೆ ಬಂದೇ ಬಿಟ್ವಿ ಎನ್ನುವ ಉತ್ಸಾಹದಲ್ಲಿದ್ದರು. ಆದರೆ, ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಮುಖಂಡರಿಗೆ ನಿದ್ದೆ ಬರುತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತವಾಗಲು ಬೇರೆ ಯಾರೂ ಬೇಡ, ಅವರ ಮುಖಂಡರೇ ಸಾಕು ಎಂದು ಕಿಚಾಯಿಸಿದರು.
ಗದಗ ವಿಧಾನಸಭಾ ಮತಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಕುರಿತು ಗದಗ ಜಿಲ್ಲಾ ಬಿಜೆಪಿಯಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. 224 ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಇದ್ದರೆ ನಿಲ್ಲಬಹುದಿತ್ತು. ಉಪ ಚುನಾವಣೆ ವೇಳೆ ನನ್ನ ಹೆಸರು ಕೇಳಿ ಬರುತ್ತಿತ್ತು. ಬೇರೆ ಕಡೆ ಹೋದಾಗಲೂ ಈ ಮಾತು ಕೇಳಿ ಬರುತ್ತಿವೆ. ಆದರೆ, ರಾಜ್ಯದ ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಸಂಘಟನೆ ಮಾಡುತ್ತಿದ್ದೇನೆ. ಉಳಿದಿರುವ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಆ ಕುರಿತು ನಮ್ಮ ಹಿರಿಯರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ನಕಲಿ ಜಾತಿ ಪ್ರಮಾಣ ಪತ್ರದ ವಿಚಾರ : ಕಾಂಗ್ರೆಸ್ ಸದಸ್ಯರಿಂದ ಧರಣಿ