ಗದಗ:ವೆಂಟಿಲೇಟರ್ ಬದಲಾಯಿಸುವ ವೇಳೆ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಮಹಿಳೆ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.
ಮಹಿಳೆಯ ಸಂಬಂಧಿಕರ ಆರೋಪವೇನು?
ನಗರದ ಅಂಬೇಡ್ಕರ್ ಬಡವಾಣೆಯ ನಿವಾಸಿ 52 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಕೋವಿಡ್ ರೋಗಿಯಾಗಿದ್ದ ಇವರು ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆ ಸಿಬ್ಬಂದಿ ವೆಂಟಿಲೇಟರ್ ಬದಲಾಯಿಸುವ ವೇಳೆ ನಿರ್ಲಕ್ಷ್ಯ ತೋರಿದ್ದರಿಂದ ಮಹಿಳೆ ಮೃತಪಟ್ಟಿದ್ದಾರೆ. ವೆಂಟಿಲೇಟರ್ ಬದಲಾಯಿಸುವಾಗ ಕೊನೆಪಕ್ಷ ಆಕ್ಸಿಜನ್ ಅಳವಡಿಸಿ ಎಂದು ಗೋಗರೆದರೂ ಆಸ್ಪತ್ರೆ ಸಿಬ್ಬಂದಿ ಕೇಳಲಿಲ್ಲ. ನಮಗೆ ಆವಾಜ್ ಹಾಕಿ ಬಾಯಿ ಮುಚ್ಚಿಸಿದರು. ವೆಂಟಿಲೇಟರ್ ತೆಗೆದ 10 ನಿಮಿಷದಲ್ಲಿ ಮಹಿಳೆ ನರಳಿ ನರಳಿ ಕೊನೆಯುಸಿರೆಳೆದಿದ್ದಾರೆ ಎಂದು ಮೃತಳ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.
ಮೃತ ಮಹಿಳೆ ಒಂದು ವಾರದಿಂದ ಜಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಉಸಿರಾಟದ ತೊಂದರೆ ಇದ್ದಿದರಿಂದ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ (ಬುಧವಾರ) ಮುಂಜಾನೆ 4.30 ರ ಸುಮಾರಿಗೆ ಬಂದ ವೈದ್ಯರು ಬೇಜವ್ದಾರಿಯಿಂದ ವೆಂಟಿಲೇಟರ್ ಬದಲಾಯಿಸಿ ಮಹಿಳೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.