ಕರ್ನಾಟಕ

karnataka

ETV Bharat / state

ಅಂಧಮಕ್ಕಳ ಪ್ರಾಣಬಿಂದುವಾದ ಜ್ಞಾನಸಿಂಧು ಶಾಲೆ! - ಅಂಧಮಕ್ಕಳು

ಯೋಗದ ಎಲ್ಲ ಆಯಾಮಗಳನ್ನು ಕರಗತ ಮಾಡಿಕೊಂಡಿರುವ ಹೊಳೆ ಆಲೂರಿನ ಜ್ಞಾನಸಿಂಧು ಅಂಧಶಾಲೆಯ ಈ ಅಂಧಮಕ್ಕಳು, ಮಲ್ಲಕಂಬ, ಕಂಪ್ಯೂಟರ್ ಶಿಕ್ಷಣ ಹಾಗೂ ಸಂಗೀತ ಜ್ಞಾನದಲ್ಲೂ ಪರಿಣಿತರು. 90 ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಶಾಲೆ ಇಂದು ರಾಷ್ಟ್ರಾದ್ಯಂತ ಹೆಸರು ಮಾಡುತ್ತಿದೆ.

ಜ್ಞಾನಸಿಂಧು ಶಾಲೆ

By

Published : Jun 20, 2019, 3:57 AM IST

ಗದಗ:ಸಾಧನೆಗೆ ಬಡತನ ಮತ್ತು ಅಂಗವೈಕಲ್ಯ ಅಡ್ಡಿ ಬರೋದಿಲ್ಲ. ಸಾಧಿಸುವ ಛಲ ಮತ್ತು ಗುರಿ ಇದ್ರೆ ಎಂಥವರೂ ಸಹ ಜಗತ್ತನ್ನೇ ತಮ್ಮತ್ತ ಸೆಳೆಯುವ ಹಾಗೆ ಮಾಡಿ ಬಿಡ್ತಾರೆ ಅನ್ನೋದಕ್ಕೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿನ ಈ ಸಾಧಕರ ತಂಡವೇ ಸಾಕ್ಷಿ.

ಹೌದು, ಇವರೇನು ಸುಖದ ಸುಪ್ಪತ್ತಿಗೆಯಲ್ಲಿ ಹುಟ್ಟಿ ಬೆಳೆದವರಲ್ಲ. ಬೇಕು ಅಂದಾಗಲೆಲ್ಲ ವಿಶೇಷ ಭೋಜನ ಇವರಿಗೆ ಸಿಕ್ಕೊದಿಲ್ಲ ಜಗತ್ತು ಇದ್ದರೂ ಸಹ ಅವರಕಣ್ಣಿಗೆ ಕಾಣೋದಿಲ್ಲ. ಅಂತವರ ತಂಡ ಮಾಡಿರೋ ಸಾಧನೆಯನ್ನು ನೋಡಿದ್ರೆ ಎಂತಹವರು ಸಹ ಬೆರಗಾಗ್ತಾರೆ.

ಯೋಗದ ಎಲ್ಲ ಆಯಾಮಗಳನ್ನು ಕರಗತ ಮಾಡಿಕೊಂಡಿರುವ ಹೊಳೆ ಆಲೂರಿನ ಜ್ಞಾನಸಿಂಧು ಅಂಧಶಾಲೆಯ ಈ ಅಂಧಮಕ್ಕಳು, ಮಲ್ಲಕಂಬ, ಕಂಪ್ಯೂಟರ್ ಶಿಕ್ಷಣ ಹಾಗೂ ಸಂಗೀತ ಜ್ಞಾನದಲ್ಲೂ ಪರಿಣಿತರು. 90 ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಈ ಶಾಲೆ ಇಂದು ರಾಷ್ಟ್ರಾದ್ಯಂತ ಹೆಸರು ಮಾಡುತ್ತಿದೆ. ರಾಜಭವನ, ರಾಷ್ಟ್ರಪತಿ ಭವನ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಲ್ಲಿ ಈ ಮಕ್ಕಳು ತಮ್ಮ ಪ್ರತಿಭೆ ಪ್ರಸ್ತುತಪಡಿಸಿದ್ದಾರೆ.

ಜ್ಞಾನಸಿಂಧು ಶಾಲೆ

ಮೂಲತಃ ಪತ್ರಕರ್ತರಾಗಿರುವ ಶಾಲಾ ಸಂಸ್ಥಾಪಕ ಶಿವಾನಂದ ಕೆಲ್ಲೂರ ಪ್ರಮುಖವಾಗಿ ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಗದಗ ಮತ್ತು ವಿಜಯಪುರ ಜಿಲ್ಲೆಗಳಿಂದ ಅಂಧಮಕ್ಕಳನ್ನು ಅವರ ಪಾಲಕರ ಮನವೊಲಿಸಿ ಇಲ್ಲಿಗೆ ಕರೆತಂದು ಶಿಕ್ಷಣ ನೀಡುತ್ತಾರೆ. ಜೊತೆಗೆ ಉಟೋಪಚಾರದ ವ್ಯವಸ್ಥೆ ಮತ್ತು ಮಕ್ಕಳ ಪಾಲನೆ-ಪೋಷಣೆಯನ್ನು ಶಿವಾನಂದ ಅವರ ತಾಯಿ ತುಳಸಮ್ಮಾ ಮಾಡುತ್ತಾರೆ. ಇನ್ನು ಯೋಗಪಟುವಾದ ಶಿವಾನಂದ ಅವರು ಮಕ್ಕಳಿಗೆ ಯೋಗಾ ಕಲಿಸುವುದರಲ್ಲಿ ನೆಮ್ಮದಿ ಕಾಣುತ್ತಿದ್ದಾರೆ.

ಶಿವಾನಂದ ಅವರ ಸಾಧನೆ ಮತ್ತು ಅವರ ತಾಯಿ ತುಳಸಮ್ಮಾ ಮಕ್ಕಳಿಗೆ ಮಾಡುವ ಪಾಲನೆ-ಪೋಷಣೆಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಸಹ ಹುಡುಕಿಕೊಂಡಿ ಬಂದಿವೆ. ಇನ್ನು ಇವರ ಸಾಧನೆ ಮೆಚ್ಚಿ ಸಾಮಾಜಿಕ ಹೋರಾಟಗಾರ ಅಣ್ಣಾಹಜಾರೆ, ಸಾಹಿತಿ ಡಾ.ಸಿದ್ದಲಿಂಗಯ್ಯ, ಸಂಗೀತಾ ಕಟ್ಟಿ, ಯೋಗಗುರು ಬಿ.ಕೆ.ಎಸ್.ಅಯ್ಯಂಗಾರ್, ಕೇಂದ್ರ ಯೋಗ ಇಲಾಖೆ ನಿರ್ದೇಶಕ ಡಾ.ಈಶ್ವರ ಬಸವರೆಡ್ಡಿ ಪ್ರಶಂಸೆ ಪತ್ರವನ್ನು ಬರೆದಿದ್ದಾರೆ.

ಶಿವಾನಂದ ಕೆಲ್ಲೂರ, ಅಂಧಮಕ್ಕಳು ಭಿಕ್ಷೆ ಬೇಡದೆ ಸ್ವತಂತ್ರವಾಗಿ ಜೀವನ ನಡೆಸಬೇಕು. ಯೋಗಮಯ ಜೀವನ ನಡೆಸುವುದರೊಂದಿಗೆ ಸ್ವಾವಲಂಬಿಗಳಾಗಬೇಕೆಂದು ನಿರ್ಧಾರ ಮಾಡಿದ್ದರ ಫಲವಾಗಿ ಕನ್ನಡದ ಕುಲಪುರೋಹಿತ ಆಲೂರ ವೆಂಕಟರಾಯರು ಹುಟ್ಟಿದ ಹೊಳೆ ಆಲೂರಲ್ಲಿ 2010 ರಲ್ಲಿ ಕೇವಲ 5 ಮಕ್ಕಳಿಂದ ಆರಂಭವಾದ ಜ್ಞಾನಸಿಂಧು ಅಂಧಮಕ್ಕಳ ವಸತಿ ಶಾಲೆ ಇಂದು ಅಂಧಮಕ್ಕಳ ಪ್ರಾಣಬಿಂದು ಶಾಲೆಯಾಗಿದೆ.

ಈ ಶಾಲೆಯ ಇನ್ನೊಂದು ಪ್ರಮುಖ ವಿಶೇಷ ಅಂದ್ರೆ ಇಲ್ಲಿ ನಾಟ್ಯಯೋಗವನ್ನು ಹೇಳಿಕೊಡಲಾಗುತ್ತದೆ. ಯೋಗ ಮತ್ತು ನಾಟ್ಯದ ಸಂಗಮವೇ ಈ ನಾಟ್ಯಯೋಗವಾಗಿದೆ. ಶಿವಪುರಾಣದಲ್ಲಿ ಶಿವ ಮತ್ತು ಪಾರ್ವತಿಗೆ ಅತಿಯಾದ ಸಂತೋಷ ಮತ್ತು ಸಿಟ್ಟು ಬಂದಾಗಲೆಲ್ಲ ಈ ನಾಟ್ಯಯೋಗವನ್ನು ಮಾಡುತ್ತಿದ್ದರಂತೆ. ಇದನ್ನು ಇನ್ನೊಂದು ಅರ್ಥದಲ್ಲಿ ಶಿವತಾಂಡವ ಎಂತಲೂ ಕರೆಯುತ್ತಾರೆ. ಹೀಗೆ ವಿಶೇಷದಿಂದ ಕೂಡಿದ ಈ ಅಂಧಮಕ್ಕಳ ಶಾಲೆಯನ್ನು ಬೆಳೆಸಲು ಹಗಲಿರುಳು ಕಷ್ಟಪಡೋ ಮಗ ಶಿವಾನಂದ ಕೆಲ್ಲೂರ ಹಾಗೂ ಅವರ ತಾಯಿ ತುಳಸಮ್ಮಾ ಅವರ ಸೇವೆಗೆ ಸಲಾಂ ಹೊಡೆಯಲೇಬೇಕು.

ABOUT THE AUTHOR

...view details