ಗದಗ:ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೆರೆಹಳ್ಳಿಯಲ್ಲಿ ಜೋಡಿ ಕೊಲೆ ನಡೆದಿದೆ. ಕಳೆದ ರಾತ್ರಿ ಹೊಟ್ಟೆ ತುಂಬ ಚಿಕನ್ ಊಟ ಮಾಡಿ ಮನೆಯ ಮಾಳಿಗೆ ಮೇಲೆ ಮಲಗಿದ್ದ ಇಬ್ಬರು ಯುವಕರನ್ನು ಮನೆಯ ಕುರಿ ಕಾಯುತ್ತಿದ್ದ ಆಳು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಫಕ್ಕಿರೇಶ್ ಮಾಚೇನಹಳ್ಳಿ (17) ಮತ್ತು ಮಹಾಂತೇಶ್ ಮಾಚೇನಹಳ್ಳಿ (28) ಕೊಲೆಗೀಡಾದ ಯುವಕರು. ಶಿರಹಟ್ಟಿ ತಾಲೂಕಿನ ಅಲಗಿಲವಾಡ ಗ್ರಾಮದ ನಿವಾಸಿ ಮಂಜುನಾಥ್ (40) ಎಂಬಾತನೇ ಜೋಡಿ ಕೊಲೆಯ ಆರೋಪಿ. ಈಗಾಗಲೇ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹತ್ಯೆಯಾದ ಫಕ್ಕಿರೇಶ್ ಮತ್ತು ಮಹಾಂತೇಶ್ ಮುಂಡರಗಿ ತಾಲೂಕಿನ ಹಲಗಿಲವಾಡದಲ್ಲಿದ್ದ ಮಂಜುನಾಥ್ನನ್ನು ಮಹಾಂತೇಶ್ ನಿನ್ನೆ ಸಂಜೆ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದ. ಮೈ ಹುಷಾರಿಲ್ಲ ಅನ್ನೋ ಕಾರಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಸಹ ಕೊಡಿಸಿದ್ದ. ಮಹಾಂತೇಶ್‌ನ ತಾಯಿ ಪಕ್ಕೀರವ್ವ, ತನ್ನ ಒಬ್ಬರು ಮಕ್ಕಳೊಂದಿಗೆ ಮಂಜುನಾಥ್ಗೂ ಚಿಕನ್ ಸಾರು, ರೊಟ್ಟಿ ಮಾಡಿ ಹೊಟ್ಟೆ ತುಂಬಾ ಊಟ ಮಾಡಿಸಿದ್ದಳು.
ಊಟ ಮಾಡಿದ ಮಹಂತೇಶ್, ಫಕ್ಕೀರೇಶ್ ಹಾಗೂ ಮಂಜುನಾಥ್ ಮನೆ ಮಾಳಿಗೆ ಮೇಲೆ ಮಲ್ಕೊಳೋದಕ್ಕೆ ಹೋಗಿದ್ದರು. ಆದರೆ, ಮಂಜುನಾಥ್ ಇಬ್ಬರು ಮಲಗುವವರೆಗೂ ಕಾದು ಕೂತಿದ್ದ. ತಡರಾತ್ರಿ 3 ಗಂಟೆ ಸುಮಾರಿಗೆ ನಿದ್ದೆಗೆ ಜಾರಿದ್ದ ಮಹಾಂತೇಶ್‌ನ ತಲೆಗೆ ಮೊದಲು ಅಲ್ಲೇ ಇದ್ದ ದೊಣ್ಣೆಯಿಂದ ಹೊಡೆದಿದ್ದಾನೆ. ಇಷ್ಟರಲ್ಲೇ ಪಕ್ಕದಲ್ಲಿ ಮಲಗಿದ್ದ ಫಕ್ಕೀರೇಶ್ ಎಚ್ಚರವಾಗಿ ಕೂಗುತ್ತಿದ್ದಂತೆಯೇ ಆತನ ಮೇಲೂ ಬಡಿಗೆಯಿಂದ ತಲೆ, ಭುಜದ ಭಾಗಕ್ಕೆ ಬಲವಾಗಿ ಹೊಡಿದಿದ್ದಾನೆ. ಇದರಿಂದ ಮಲಗಿದಲ್ಲೇ ಇಬ್ಬರೂ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ, ಹತ್ಯೆ ಮಾಡಿದ್ದ ಆರೋಪಿ ಮಂಜುನಾಥ್ ಒಂದು ಗಂಟೆ ಕಾಲ ಮೆಟ್ಟಿಲ ಮೇಲೆಯೇ ಕೂತಿದ್ದ. ದೊಣ್ಣೆಯಿಂದ ನೆಲಕ್ಕೆ ಕುಟ್ಟುತ್ತಾ ಕೂತಿದ್ನಂತೆ. ಮಹಡಿ ಮೇಲಿನ ಸಪ್ಪಳ ಪಕ್ಕೀರವ್ವನಿಗೆ ಕೇಳಿದೆ. ಆದ್ದರಿಂದ ಏನಾಗಿದೆ ಅಂತಾ ನೋಡಲು ಹೋಗ್ಬೇಕೆನ್ನುಷ್ಟರಲ್ಲಿ ಮೆಟ್ಟಿಲ ಮೇಲಿದ್ದ ಹಂತಕ ಮಂಜುನಾಥ್, ಮೇಲೆ ಬಂದ್ರೆ ಮತ್ತೊಂದು ಜೀವ ತಗೋತೀನಿ ಅಂತಿದ್ನಂತೆ.
ಬಳಿಕ ಗ್ರಾಮಸ್ಥರು ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಹಣದ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಅಲ್ಲದೇ, ಬೇರೆ ಕಾರಣಗಳಿಂದಲೂ ಕೊಲೆ ನಡೆದಿದೆಯಾ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದರು.
ಇದನ್ನೂ ಓದಿ:ಮಗನಿಗೆ MBBS ಸೀಟು ಕೊಡಿಸಲು ವೈದ್ಯ ತಂದೆಯ ಪರದಾಟ; ವಂಚಕರು ಪೀಕಿದ್ದು ₹1.16 ಕೋಟಿ!