ಗದಗ:ತನ್ನ ಜಮೀನಿನಲ್ಲಿ ಅನುಮತಿ ಇಲ್ಲದೆ ಸೋಲಾರ್ ಅಳವಡಿಸಿರೋ ಎಂ ಪ್ಲಸ್ ಸೋಲಾರ್ ಕಂಪನಿ ವಿರುದ್ಧ ರೈತನೊಬ್ಬ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಗದಗ ತಾಲೂಕಿನ ಹೊಲಕೋಟಿ ಕುರ್ತಕೋಟಿ ಗ್ರಾಮಕ್ಕೆ ಹೊಂದಿಕೊಂಡಿರುವ ಬಸವರಾಜ್ ಗೊಬ್ಬರಗುಂಪಿ ಎಂಬುವರ ಜಮೀನಿನಲ್ಲಿ 8 ತಿಂಗಳ ಹಿಂದೆ ಎಂ ಪ್ಲಸ್ ಸೋಲಾರ್ ಕಂಪನಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಿದೆ. ಇಲ್ಲಿಂದ 10 ಕಿ.ಮೀ. ದೂರದಲ್ಲಿ ವಾಸವಿರುವ ಬಸವರಾಜ್, ಬೇಸಿಗೆಯಲ್ಲಿ ಮಳೆಯಾಗದ ಕಾರಣ ಜಮೀನಿಗೆ ಬಂದಿರಲಿಲ್ಲ. ಇತ್ತೀಚೆಗೆ ಜಮೀನಿಗೆ ಬಂದಾಗ ನಿಜಕ್ಕೂ ಅವರಿಗೆ ಶಾಕ್ ಆಗಿದೆ.
ರೈತನ ಜಮೀನಿನಲ್ಲಿ ಸೋಲಾರ್ ಘಟಕ! ಎಂ ಪ್ಲಸ್ ಸೋಲಾರ್ ಕಂಪನಿಯು ತನ್ನ ಜಮೀನನ್ನು ಅತಿಕ್ರಮಣ ಮಾಡಿ, ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಮಾಡಿದೆ ಎಂಬುದು ಬಸವರಾಜ್ ಆರೋಪ. ಈ ಬಗ್ಗೆ ಬಸವರಾಜ್ ಕಂಪನಿಯವರನ್ನು ಪ್ರಶ್ನಿಸಿದರೆ, ನಮ್ಮ ಬಳಿ ನಿಮ್ಮ ಜಮೀನಿನ ಕರಾರು ಪತ್ರ ಇದೆ ಎಂದು ದೌರ್ಜನ್ಯ ಎಸಗಿದರು ಎಂದು ಆಪಾದಿಸಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಬಸವರಾಜ್, ಐದು ವರ್ಷಗಳಿಂದ ಬರದ ಬೇಗೆಯಲ್ಲಿ ಬೆಂದಿದ್ದೇನೆ. ಇದೀಗ ಜಮೀನಿಗೂ ಸಂಚಕಾರ ಬಂದಿದೆ. ಕುರ್ತಕೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ. 270ರ 7 ಎಕರೆ ಜಮೀನನ್ನು ಎಂ ಪ್ಲಸ್ ಸೋಲಾರ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಶಪಡಿಸಿಕೊಂಡಿದೆ. ನನ್ನ ಅಪ್ಪಣೆ ಇಲ್ಲದೆ ಜಮೀನಿಗೆ ಎಂ ಪ್ಲಸ್ ಸೋಲಾರ್ ಕಂಪನಿ ಕಂಪೌಂಡ್ ಹಾಕಿದೆ. ಇದನ್ನು ಕೇಳೋಕೆ ಹೋದರೆ ಕಾವಲುಗಾರರನ್ನು ಬಿಟ್ಟು ಗೂಂಡಾಗಿರಿ ಮಾಡ್ತಾರೆ ಎಂದಿದ್ದಾರೆ.
ತಮಗಾಗಿರುವ ಅನ್ಯಾಯದ ಕುರಿತು ರೈತನ ಸಹೋದರ ಮತ್ತು ಸಂಬಂಧಿಗಳು ವಿಎ, ತಹಶೀಲ್ದಾರ್ ಅವರಿಂದ ಹಿಡಿದು ಗದಗ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದಾರೆ.
ಜಮೀನುವಾಪಸ್ ಮಾಡ್ತೇವೆ:
ಎಂ ಪ್ಲಸ್ ಸೋಲಾರ್ ಕಂಪನಿಯ ಅಧಿಕಾರಿ ಮನೋಹರ್ ಮಾತನಾಡಿ, ನಿಖರ ಮಾಹಿತಿ ಪಡೆದೇ ಅಲ್ಲಿ ಘಟಕಗಳನ್ನು ಅಳವಡಿಸಲಾಗಿತ್ತು. ಇದೆಲ್ಲಾ ಮುಗಿದ ನಂತರ ರೈತ ತಕರಾರು ತೆಗೆದು, ಜಮೀನು ನಮ್ಮ ಹೆಸರಿನಲ್ಲಿದೆ. ನಾವು ಒಪ್ಪಿಗೆ ಕೊಟ್ಟಿಲ್ಲ ಎಂದು ಹೇಳ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ ನಂತರ ನಮ್ಮ ಕಡೆಯಿಂದ ತಪ್ಪಾಗಿರುವುದು ಗೊತ್ತಾಗಿದೆ. ತಕ್ಷಣ ಘಟಕಗಳನ್ನು ತೆರವುಗೊಳಿಸಿ, ಜಮೀನು ರೈತರಿಗೆ ಒಪ್ಪಿಸಲಾಗುವುದು ಎಂದಿದ್ದಾರೆ.