ಗದಗ:ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಬಸಪ್ಪ ಹುಗ್ಗಿ ಎಂಬ ರೈತ, ಮನೆಯಂಗಳದಲ್ಲಿ ವಿವಿಧ ರೀತಿಯ ತರಕಾರಿ ಬೆಳೆದು ಯಶಸ್ವಿಯಾಗಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಮನೆಯಂಗಳದಲ್ಲಿ ತರಕಾರಿ ಬೆಳೆದು ಬದುಕು ಕಟ್ಟಿಕೊಂಡ ರೈತ..!
ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿದ್ದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಬಸಪ್ಪ ಹುಗ್ಗಿ ಎಂಬ ರೈತ, ಮನೆಯಂಗಳದಲ್ಲಿ ವಿವಿಧ ರೀತಿಯ ತರಕಾರಿ ಬೆಳೆದು ಪ್ರತಿನಿತ್ಯ 100 ರಿಂದ 200 ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಶಿಗ್ಲಿ ಗ್ರಾಮದಲ್ಲಿ ಕೆಲವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಗ್ರಾಮವನ್ನು ಸೀಲ್ಡೌನ್ ಮಾಡಲಾಗಿತ್ತು. ಈ ವೇಳೆ ಸ್ಥಳೀಯರಿಗೆ ತರಕಾರಿ ಅಭಾವ ಉಂಟಾಗಿತ್ತು. ಹೀಗಾಗಿ ತರಕಾರಿ ಬೆಳೆಯಲು ಯೋಚಿಸಿದ ಬಸಪ್ಪ, ತಮ್ಮ ಮನೆಯ ಅಂಗಳದಲ್ಲೇ ಬದನೆಕಾಯಿ, ಸೌತೆಕಾಯಿ, ಬೆಂಡೆಕಾಯಿ, ಹೀರೇಕಾಯಿ, ಅಲಸಂದೆ, ಹೆಸರುಕಾಳು, ಕೊತ್ತಂಬರಿ, ಹಾಗಲಕಾಯಿ, ಟೊಮ್ಯಾಟೊ, ಬೀನ್ಸ್, ವೀಳ್ಯದೆಲೆ ಹೀಗೆ ನಾನಾ ತರಹದ ಬೆಳೆಗಳನ್ನು ಬೆಳೆದಿದ್ದಾರೆ.
ಈ ತರಕಾರಿಗಳನ್ನು ಮಾರಿ ಪ್ರತಿನಿತ್ಯ 100 ರಿಂದ 200 ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಬಸಪ್ಪ ಅವರ ಕೈತೋಟ ನೋಡಿ ಗ್ರಾಮದ ಜನರು ಕೂಡ ಬೇಷ್ ಎಂದಿದ್ದಾರೆ.