ಗದಗ:ಪ್ರವಾಹಕ್ಕೆ ಸಿಲುಕಿ ಮನೆ ಕುಸಿದಿರುವುದನ್ನು ಕಂಡು ನೊಂದಿದ್ದ ವೃದ್ಧೆಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಹೊಸಬೂದಿಹಾಳದ ಪರಿಹಾರ ಕೇಂದ್ರದಲ್ಲಿ ನಡೆದಿದೆ.
ಪ್ರವಾಹದಿಂದ ಮನೆ ಕುಸಿತ: ಹೃದಯಾಘಾತದಿಂದ ವೃದ್ಧೆ ಸಾವು - ಹೊಸಬೂದಿಹಾಳ
ಪ್ರವಾಹದಿಂದ ತಮ್ಮ ಮನೆ ಕಳೆದುಕೊಂಡ ದುಃಖದಲ್ಲಿದ್ದ ವೃದ್ಧೆಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನರಗುಂದ ತಾಲೂಕಿನ ಬೂದಿನಾಳ ಗ್ರಾಮದ ಹನುಮವ್ವ (62) ಮೃತ ವೃದ್ಧೆಯಾಗಿದ್ದಾರೆ. ಇವರು ಹೊಸಬೂದಿಹಾಳದ ಪರಿಹಾರ ಕೇಂದ್ರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪರಿಹಾರ ಕೇಂದ್ರದಲ್ಲಿದ್ದ ಅವರು ಪ್ರವಾಹ ಇಳಿದಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿದ್ದರು. ಆದರೆ ಅಲ್ಲಿ ತಾನು ವಾಸವಾಗಿದ್ದ ಮನೆ ಕುಸಿದು ಬಿದ್ದಿರುವುದನ್ನು ಕಂಡು ಮಾನಸಿಕವಾಗಿ ಕುಗ್ಗಿದ್ದರು.
ಬಳಿಕ ಪರಿಹಾರ ಕೇಂದ್ರಕ್ಕೆ ಬಂದಿದ್ದ ಅವರು ಮನೆ ಕುಸಿದಿರುವ ದುಃಖದಲ್ಲೇ ಇದ್ದರು. ನಿನ್ನೆ ರಾತ್ರಿ ಪರಿಹಾರ ಕೇಂದ್ರದಲ್ಲೇ ಹೃದಯಾಘಾತಕ್ಕೊಳಗಾಗಿ ಹನುಮವ್ವ ಮೃತಪಟ್ಟಿದ್ದಾರೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.