ಗದಗ: ಇದೇ ಮೊದಲ ಬಾರಿಗೆ ಗದಗದಲ್ಲಿ ಒಂದೇ ದಿನಕ್ಕೆ 30 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಸೋಂಕಿಗೆ ತುತ್ತಾಗಿರುವುದು ಆತಂಕ ಹೆಚ್ಚಿಸಿದೆ.
2 ವರ್ಷ, 3 ವರ್ಷ ಮತ್ತು 5 ವರ್ಷ ಸೇರಿ ಒಟ್ಟು 9 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. 17 ಮಹಿಳೆಯರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ನಾಲ್ಕು ಜನ ಪುರುಷರು ಸೋಂಕಿಗೆ ಒಳಗಾಗಿದ್ದಾರೆ. ನೀರಾವರಿ ಇಲಾಖೆಯಲ್ಲಿ ಅಕೌಂಟಂಟ್ ಆಗಿ ಕೆಲಸ ಮಾಡುತ್ತಿದ್ದ ನೌಕರ ಜಿಲ್ಲೆಯ ಪಾಲಿಗೆ ಕಂಟಕವಾಗಿದ್ದಾನೆ. ಈ ವ್ಯಕ್ತಿಯಿಂದ ಒಟ್ಟು 14 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಅಲ್ಲದೇ ಆತನ ಸಂಪರ್ಕದಲ್ಲಿದ್ದ 100 ಕ್ಕೂ ಹೆಚ್ಚು ಜನರಿಗೆ ಕೊರೊನಾ ಆತಂಕ ಶುರುವಾಗಿದೆ.
ಇವತ್ತು ಒಂದೇ ದಿನ 30 ಜನರಲ್ಲಿ ಕೋವಿಡ್ ದೃಢಪಟ್ಟಿದ್ದು, ಶಿರಹಟ್ಟಿಯ ಮಹಿಳೆಯೊಬ್ಬರನ್ನು ಹೊರತುಪಡಿಸಿ ಇನ್ನುಳಿದ 29 ಜನ ಮುಂಡರಗಿಯವರಾಗಿದ್ದಾರೆ. ಮುಂಡರಗಿ ಪಟ್ಟಣದಲ್ಲಿ ನೀರಾವರಿ ಇಲಾಖೆ ಕಚೇರಿಯಲ್ಲಿ ಅಕೌಂಟಂಟ್ ಆಗಿರುವ ಸೋಂಕಿತ ಜಿಲ್ಲೆಯ ಗದಗ, ರೋಣ ಮತ್ತು ಮುಂಡರಗಿ ತಾಲೂಕುಗಳಲ್ಲಿ ಓಡಾಡಿದ್ದು, ಇವನ ಸಂಪರ್ಕದಲ್ಲಿದ್ದ ಜನರಲ್ಲಿ ಆತಂಕ ಶುರುವಾಗಿದೆ. 38 ವರ್ಷದ ಈ ಸೋಂಕಿತ ಪಿ-9407 ತನ್ನ ಕರ್ತವ್ಯದ ದಿನಚರಿಯ ಭಾಗವಾಗಿ ಜಿಲ್ಲೆಯ ಮೂರು ತಾಲೂಕು ಸೇರಿದಂತೆ ತನ್ನ ಸ್ವಗ್ರಾಮ ಗಜೇಂದ್ರಗಡ ತಾಲೂಕಿನ ಇಟಗಿ ಗ್ರಾಮದಲ್ಲಿಯೂ ಪ್ರತಿದಿನವೂ ಓಡಾಡುತ್ತಿದ್ದ. ತನ್ನ ಸ್ವಗ್ರಾಮ ಇಟಗಿಯ ನಿವಾಸದಲ್ಲಿ ಈ ವ್ಯಕ್ತಿ ಕೈಗೊಂಡ ತಂದೆಯ ತಿಥಿ ಕಾರ್ಯದಲ್ಲಿ ಇಟಗಿ ಭೀಮಮ್ಮ ದೇವಸ್ಥಾನದ ಧರ್ಮದರ್ಶಿ ಸೇರಿದಂತೆ ಹಲವಾರು ಗ್ರಾಮಸ್ಥರು ಭಾಗಿಯಾಗಿದ್ದರು.
ಈಗ ಇಟಗಿ ಭೀಮಮ್ಮ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈತ ವಾಸವಿದ್ದ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಮುಂಡರಗಿಯಲ್ಲಿ 29 ಜನರಿಗೆ ಸೋಂಕು ತಗುಲಿರುವುದು ಖಚಿತವಾಗುತ್ತಿದ್ದಂತೆ ಪಟ್ಟಣದ ಹಲವು ಬಡಾವಣೆಗಳನ್ನು ಸೀಲ್ ಡೌನ್ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಪತ್ತೆಯಾದ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಗುರುತಿಸುವ ಕಾರ್ಯವೂ ನಡೆದಿದೆ.
ಇನ್ನೊಂದೆಡೆ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದ ಮಹಿಳೆಗೂ ಸೋಂಕು ತಗುಲಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಈ ಮಹಿಳೆ ತನ್ನ ತವರು ಮನೆ ಸೂರಣಗಿಯಲ್ಲಿ ನಡೆದ ಮದುವೆಯೊಂದರಲ್ಲಿ ಭಾಗವಹಿಸಿದ್ದರು. ಹೀಗಾಗಿ ಸೂರಣಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಕೊರೊನಾ ಭಯ ಎದುರಾಗಿದೆ.