ಗದಗ:ಕಳೆದ ಕೆಲ ದಿನಗಳಿಂದ ಡೆಡ್ಲಿ ವೈರಸ್ ಕೊರೊನಾ ಹಳ್ಳಿಗಳಿಗೆ ಲಗ್ಗೆ ಹಾಕಿದ್ದು, ರಣಕೇಕೆ ಹಾಕ್ತಿದೆ. ಇದರಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದ ಹಳ್ಳಿಗರ ನಿದ್ದೆಗೆಡಿಸಿದೆ. ಸಾಂಕ್ರಾಮಿಕ ರೋಗದಿಂದ ಗಲ್ಲಿ ಗಲ್ಲಿಗಳಿಗೆ ಹತ್ತಾರು ಜನರು ಸಾವನ್ನಪ್ಪುತ್ತಿದ್ದಾರೆ.
ಈಗಾಗಲೇ ಅನೇಕ ಗ್ರಾಮಗಳಲ್ಲಿ ವಾರದಲ್ಲಿ ಹತ್ತಾರು ಜನರು ಸಾವನ್ನಪ್ಪಿರುವ ವರದಿ ಪ್ರಸಾರಗೊಂಡಿದ್ದು, ಇದೀಗ ಗದಗಿನ ಕದಡಿ ಎನ್ನುವ ಪುಟ್ಟ ಗ್ರಾಮದಲ್ಲಿ ಹೆಮ್ಮಾರಿಗೆ ಹತ್ತು ದಿನದಲ್ಲಿ ಹನ್ನೊಂದು ಜನರು ಸಾವನ್ನಪ್ಪಿದ್ದಾರೆ.
ಒಂದೇ ಊರಲ್ಲಿ 10 ದಿನದಲ್ಲಿ 11 ಸಾವು ಆರು ಜನರು ಕರೊನಾ ಸೋಂಕಿನಿಂದ ಸಾವನ್ನಪ್ಪಿದ್ರೆ, ಐದು ಜನರು ಜ್ವರ,ಕೆಮ್ಮು ಸೇರಿದಂತೆ ವಿವಿಧ ಲಕ್ಷಣಗಳಿಂದ ಬಳಲಿ ಸಾವನ್ನಪ್ಪಿದ್ದಾರೆ. ಕೇವಲ ಹತ್ತು ದಿನದಲ್ಲಿ ಹನ್ನೊಂದು ಜನ್ರು ಸಾವನ್ನಪ್ಪಿರುವುದರಿಂದ ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.
ಕೋವಿಡ್ ಲಕ್ಷಣದಿಂದ ಆಸ್ಪತ್ರೆಗೆ ಹೋದವರು ಜೀವಂತವಾಗಿ ಮರಳಿ ಬರುವುದಿಲ್ಲ ಎಂಬ ಕಾರಣಕ್ಕಾಗಿ ಅನೇಕರು ಹೆದರಿ ಪ್ರಾಣ ಸಹ ಕಳೆದುಕೊಳ್ಳುತ್ತಿದ್ದಾರೆ. ಕೋವಿಡ್ ಲಕ್ಷಣ ಹೊಂದಿದ್ದ 45 ವರ್ಷದ ಲಲತಾ ಗ್ರಾಮದ ಹೊರವಲಯದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹಾಗಾಗಿ ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಪಿಡಿಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅನಾಥ ಶವದ ಅಂತ್ಯಕ್ರಿಯೆ ನಡೆಸಿದ ರೈಲ್ವೇ ಹೆಡ್ಕಾನ್ಸ್ಟೇಬಲ್... ಮಾನವೀಯತೆಗೆ ಮೆಚ್ಚುಗೆ
ಸುಮಾರು ನಾಲ್ಕು ಸಾವಿರ ಜನ ಸಂಖ್ಯೆ ಇರುವ ಈ ಕದಡಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಎರಡು ಮನೆಗೆ ಇಬ್ಬರಂತೆ ಕೋವಿಡ್ ಲಕ್ಷಣ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಇಡೀ ಗ್ರಾಮ ಕೊರೊನಾ ಭಯದಲ್ಲಿ ಜೀವನ ನಡೆಸುವಂತಾಗಿದೆ. ಗ್ರಾಮದಲ್ಲಿ ಪಿಡಿಓ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಆದರೆ ಈ ಕುರಿತು ಪಿಡಿಓ ಅವರನ್ನು ಕೇಳಿದರೆ ಗ್ರಾಮದಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಊರು ತುಂಬ ಸ್ಯಾನಿಟೈಸರ್ ಮಾಡುತ್ತಿದ್ದೇವೆ. ಗ್ರಾಮದ ಜನರಿಗೆ ಕರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಆದರೆ ಗ್ರಾಮಸ್ಥರು ಸಹಕಾರ ನೀಡುತ್ತಿಲ್ಲ ಎಂದು ಪಿಡಿಓ ಹೇಳಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಗ್ರಾಮಕ್ಕೆ ಬಂದಿರುವ ಕಾರಣ ಕೋವಿಡ್ ಉಲ್ಬಣಗೊಂಡಿದೆ ಎಂದು ತಿಳಿಸಿದ್ದಾರೆ.