ಗದಗ :ವ್ಯಕ್ತಿಯೊಬ್ಬರು ತಮ್ಮ ಬೈಕ್ ನ ಸೈಡ್ ಬ್ಯಾಗ್ ನಲ್ಲಿರಿಸಿದ್ದ 10 ಲಕ್ಷ ರೂ.ವನ್ನು ಖದೀಮರು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಎಪಿಎಂಸಿ ಬಳಿ ಇರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ೧೦ ಲಕ್ಷ ರೂ.ಹಣವನ್ನು ತೆಗೆದು ಬೈಕ್ ನ ಸೈಡ್ ಬ್ಯಾಗ್ ನಲ್ಲಿ ಇರಿಸಿಕೊಂಡು ಹೋಗುವಾಗ ಕಳ್ಳ ಕೈಚಳಕ ತೋರಿದ್ದಾನೆ. ಪಟ್ಟಣದ ರಾಜೇಂದ್ರ ಕಾಟನ್ ಇಂಡಸ್ಟ್ರೀಸ್ನಲ್ಲಿ ಹಲವಾರು ವರ್ಷಗಳಿಂದ ಕಾರ್ಖೂನನಾಗಿ ಸೇವೆ ಸಲ್ಲಿಸುತ್ತಿರುವ ರಾಮನಗೌಡ ಫಕ್ಕೀರಗೌಡ ಪಾಟೀಲ ಎಂಬುವವರು ಹಣ ಕಳೆದುಕೊಂಡ ವ್ಯಕ್ತಿ ಎಂದು ತಿಳಿದುಬಂದಿದೆ.
ರಾಮನಗೌಡ ಅಕೌಂಟ್‌ನಿಂದ ಹಣ ಡ್ರಾ ಮಾಡಿ ಕೈಚೀಲದಲ್ಲಿ ಹಾಕಿಕೊಂಡು ಬೈಕ್ ಸೈಡ್ ಬ್ಯಾಗ್‌ನಲ್ಲಿರಿಸಿಕೊಂಡು ಹೊರಟಿದ್ದಾರೆ. ಕದಿಯಲು ಹೊಂಚು ಹಾಕಿ ಕುಳಿತಿದ್ದ ಖದೀಮರು ಬೈಕ್ ನ್ನು ಹಿಂಬಾಲಿಸಿದ್ದಾರೆ. ಈ ವೇಳೆ ರಾಮನಗೌಡ್ರ ಬೈಕ್‌ನ್ನು ನಿಧಾನ ಮಾಡಿದ್ದು, ಆಗ ಕಳ್ಳನೋರ್ವ ಕ್ಷಣ ಮಾತ್ರದಲ್ಲಿ ಹಣ ಲಪಟಾಯಿಸಿ ಪರಾರಿಯಾಗಿದ್ದಾನೆ. ಬ್ಯಾಂಕಿನಿಂದ ಕೆಲವೇ ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.