ಹುಬ್ಬಳ್ಳಿ:ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯುವಜನತೆ ಮಹತ್ವದ ಪಾತ್ರ ವಹಿಸುವರು. ಯುವಜನರಿಗೆ ಅತಿ ಹೆಚ್ಚು ಅವಕಾಶ ಕೊಡುವ ಬಿಜೆಪಿ, ನೂರಕ್ಕೆ ನೂರರಷ್ಟು ಉತ್ತರ ಕರ್ನಾಟಕ ಭಾಗದಲ್ಲಿ ಅತಿಹೆಚ್ಚು ಸ್ಥಾನಗಳಲ್ಲಿ ವಿಜಯ ಸಾಧಿಸಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ - ಧಾರವಾಡದಲ್ಲಿ ಯುವಜನೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರುಗುತ್ತಿದೆ. ಯುವಜನೋತ್ಸವಕ್ಕೆ ದೇಶದ ವಿವಿಧ ಮೂಲೆ ಮೂಲೆಯಿಂದ ಭಾಗವಹಿಸಲು ಯುವಕ-ಯುವತಿಯರು ಆಗಮಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಅವರೆಲ್ಲ ಉತ್ಸಾಹದಿಂದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನೂ ಮೈಗೂಡಿಸಿಕೊಳ್ಳುವ ಉದ್ದೇಶದಿಂದ ಯುವಜನೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈಗಾಗಲೇ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ದೇಶಕ್ಕೆ ಹಾಗೂ ಯುವಜನರಿಗೆ ಉತ್ತಮ ಸಂದೇಶ ಕೊಟ್ಟಿದ್ದಾರೆ ಎಂದು ತೇಜಸ್ವಿ ತಿಳಿಸಿದರು.
ಗೆಲ್ಲುವ ಖುಷಿಯಲ್ಲಿ ಯುವಮೋರ್ಚಾ:ಇಂದು ನಾನು ಸಹ ಯುವಜನೋತ್ಸವದಲ್ಲಿ ಭಾಗಿಯಾಗಲು, ಯುವಕರನ್ನು ಉದ್ದೇಶಿಸಿ ಮಾತನಾಡಲು ಇಲ್ಲಿಗೆ ಬಂದಿದ್ದೇನೆ. ಇದಕ್ಕೂ ಪೂರ್ವದಲ್ಲಿ ಯುವ ಮೋರ್ಚಾದ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮ ಕೂಡ ಮಾಡಿದ್ದೇನೆ. ಬಹಳ ಉತ್ಸಾಹದಿಂದ ನಮ್ಮ ಕಾರ್ಯಕರ್ತರು ಚುನಾವಣೆಯನ್ನು ಎದುರು ನೋಡುತ್ತಾ ಇದ್ದಾರೆ. ಗೆಲ್ಲುವ ಖುಷಿಯಲ್ಲಿ ಯುವಮೋರ್ಚಾ ಕಾರ್ಯಕರ್ತರು ವಿವಿಧ ಕಾರ್ಯದ ಚಟುವಟಿಕೆಗಳಲ್ಲಿ ಮುಂದುವರಿದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯುವಜನರು ಬಿಜೆಪಿ ಯೋಜನೆಗಳಿಂದ ಆಕರ್ಷಿತರಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೂ ಜನಪರ ಆಗಿರುವ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಜನರ ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಯುವ ಪಡೆ ಮಾಡುತ್ತಿದೆ ಎಂದು ಹೇಳಿದರು.