ಹುಬ್ಬಳ್ಳಿ : ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನಾ ಸಮಾರಂಭವನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಇಬ್ಬರು ಯುವಕರು ಬೈಕ್ ಮೇಲೆ ಅಯೋಧ್ಯೆಗೆ ಪ್ರಯಾಣ ಕೈಗೊಂಡು ಗಮನ ಸೆಳೆದಿದ್ದಾರೆ. ಮತ್ತೋರ್ವ ಯುವಕ ತನ್ನ ಕಾರನ್ನು ಸಂಪೂರ್ಣ ಕೇಸರಿಮಯ ಮಾಡಿ ರಾಮಭಕ್ತಿ ಪ್ರದರ್ಶಿಸಿದ್ದಾರೆ.
ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಸೋಮಶೇಖರ ವಲಮಣ್ಣವರ ಹಾಗೂ ಅಶೋಕ ಅಗಡಿ ಎಂಬುವರು ಬೈಕ್ ಮೇಲೆ ಅಯೋಧ್ಯೆಗೆ ಹೊರಟಿದ್ದಾರೆ. ನೂಲ್ವಿಯಿಂದ ಭಾನುವಾರ ಸಂಜೆಯೇ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ. ಹುಬ್ಬಳ್ಳಿಯಿಂದ ಅಯೋಧ್ಯೆಗೆ 1799 ಕಿ. ಮೀ ಅಂತರವಿದೆ. ದಿನವೊಂದಕ್ಕೆ 300 ಕಿ.ಮೀ. ಪ್ರಯಾಣ ಮಾಡುವ ಗುರಿಯೊಂದಿಗೆ ಹೊರಟ ಯುವಕರು, ಮೊದಲ ದಿನವೇ ಮಹಾರಾಷ್ಟ್ರದ ನಾಂದೇಡವನ್ನು ತಲುಪಿದ್ದರು.
ಅಯೋಧ್ಯೆಗೆ ಬೈಕ್ ಸವಾರಿ ಹೊರಟ ಯುವಕರು ಮಂಗಳವಾರ ಮಧ್ಯಪ್ರದೇಶವನ್ನು ತಲುಪಿದ್ದು, ಬುಧವಾರ ಮತ್ತೆ ಪ್ರಯಾಣ ಬೆಳೆಸುತ್ತಿದ್ದಾರೆ. ವಾರಣಾಸಿಯಲ್ಲಿ ಎರಡು ದಿನ ವಾಸ್ತವ್ಯ ಹೂಡಿ, ಜ. 20ರಂದು ಅಯೋಧ್ಯೆ ತಲುಪಲಿದ್ದಾರೆ. ಇವರ ಭಕ್ತಿಗೆ ರಸ್ತೆಯಲ್ಲಿ ಅಲ್ಲಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾ ಎಲ್ಲ ರೀತಿ ಸಹಕಾರ ನೀಡುತ್ತಿದ್ದಾರೆ. ರಸ್ತೆಯುದ್ದಕ್ಕೂ ನಮಗೆ ಜೈ ಶ್ರೀರಾಮ ಎಂಬ ಜಯಘೋಷದೊಂದಿಗೆ ಜನರು ಹುರಿದುಂಬಿಸುತ್ತಿದ್ದಾರೆಂದು ಯುವಕರು ತಿಳಿಸಿದ್ದಾರೆ.
ರಾಮಮಂದಿರ ಉದ್ಘಾಟನೆಯ ವೈಭವವನ್ನು ಕಣ್ತುಂಬಿಕೊಳ್ಳಲು ಬೈಕ್ ಮೇಲೆ ಅಯೋಧ್ಯೆಗೆ ಹೊರಟಿರುವುದು ನಿಜಕ್ಕೂ ಖುಷಿ ಎನಿಸುತ್ತಿದೆ ಎಂದು ಸವಾರರಾದ ಸೋಮಶೇಖರ, ಅಶೋಕ ಸಂತಸ ವ್ಯಕ್ತಪಡಿಸುತ್ತಾರೆ.
ಅಯೋಧ್ಯೆಗೆ ಬೈಕ್ ಸವಾರಿ ಹೊರಟ ಯುವಕರು ಕಾರನ್ನು ಕೇಸರಿಮಯಗೊಳಿಸಿ ಅಭಿಮಾನ:ಇನ್ನು ಹುಬ್ಬಳ್ಳಿಯ ಹೊಸೂರು ನಿವಾಸಿ ಸಚಿನ್ ಮಿಸ್ಕಿನ್ ತಮ್ಮ ಕಾರಿಗೆ ಸಂಪೂರ್ಣವಾಗಿ ರಾಮ, ಹನುಮಂತನ ಸ್ಟಿಕ್ಕರ್ ಅಂಟಿಸಿ, ಕಾರಿನ ತುಂಬೆಲ್ಲ ಜೈ ಶ್ರೀರಾಮ ಘೋಷಣೆಗಳು, ರಾಮ, ಲಕ್ಷ್ಮಣರ ಭಾವಚಿತ್ರ ಅಂಟಿಸಿ ತಮ್ಮದೇ ಶೈಲಿಯಲ್ಲಿ ರಾಮಭಕ್ತಿಯನ್ನು ಪ್ರದರ್ಶಿಸಿದ್ದಾರೆ.
ಶ್ರೀರಾಮನ ದರ್ಶನಕ್ಕೆ ಪಾದಯಾತ್ರೆ (ಪ್ರತ್ಯೇಕ ಸುದ್ದಿ): ಅಯೋಧ್ಯೆಯಲ್ಲಿ ಇದೇ ತಿಂಗಳ 22ರಂದು ಶ್ರೀರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆ ಹುಬ್ಬಳ್ಳಿಯ ಯುವಕನೋರ್ವ 1,799 ಕಿ.ಮೀ ದೂರದಲ್ಲಿರುವ ತನ್ನ ಆರಾಧ್ಯದೈವ ಶ್ರೀರಾಮಚಂದ್ರನ ದರ್ಶನಕ್ಕೆ ಪಾದಯಾತ್ರೆ (ಜನವರಿ-12-23) ತೆರಳಿದ್ದಾರೆ.
ಇಲ್ಲಿನ ಆನಂದ ನಗರದ ಸಮೀಪ ಘೋಡಕೆ ಪ್ಲಾಟ್‌ನ ಮಲ್ಲೇಶ್ವರ ನಗರದಲ್ಲಿ ತನ್ನ ತಾಯಿ, ಅಕ್ಕಂದಿರೊಂದಿಗೆ ವಾಸವಾಗಿರುವ ಯುವಕ ಮನೋಜ್ ಅರ್ಕಾಟ್ ಶ್ರೀರಾಮ ದರ್ಶನಕ್ಕೆ ಅಯೋಧ್ಯೆಗೆ ಪಾದಯಾತ್ರೆ ಬೆಳೆಸಿದವರು. ಖಾಸಗಿ ಮಳಿಗೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮನೋಜ್ ಶ್ರೀರಾಮನ ಪರಮಭಕ್ತ. ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೋಗುವುದಾಗಿ ತಿಳಿಸಿದಾಗ ಮನೆಯಲ್ಲಿ ಅಷ್ಟು ದೂರ ಒಬ್ಬನೇ ಹೋಗುವುದು ಬೇಡ ಎಂದು ತಾಯಿ ನೀಲಾ ಆರ್ಕಾಟ್ ಹೇಳಿದ್ದರು. ಕೊನೆಗೆ ಆ ದೇವರ ಇಚ್ಛೆಯಂತೆ ಆಗಲಿ ಎಂದು ಯಾತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೊರಟ ಹುಬ್ಬಳ್ಳಿಯ ಯುವಕ: ಶ್ರೀರಾಮನ ದರ್ಶನಕ್ಕೆ ಪಾದಯಾತ್ರೆ