ಧಾರವಾಡ: ಹೆಬ್ಬಳ್ಳಿ ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಹಾಕಿದ್ದಾರೆ.
ಬಿದ್ದು ಎದ್ದು ಗೆದ್ದು ಬರುವೆನು.. ಸತ್ಯದ ತಳಹದಿಯಿಂದ ಎದ್ದು ಗೆದ್ದು ಬರುವೆನು.. ಸುಳ್ಳು ಕುಣಿಯುತ್ತಿರೋವಾಗ ಸತ್ಯ ಅಳುತ್ತದೆ.. ಆದ್ರೆ ಸತ್ಯ ಎದ್ದು ನಿಂತಾಗ ಸುಳ್ಳು ಸತ್ತೇ ಹೋಗುತ್ತದೆ.. ಸತ್ಯಕ್ಕೆ ಸೋಲಿಲ್ಲ.. ಎಂದು ಮಾಜಿ ವಿನಯ್ ಕುಲಕರ್ಣಿ ಪೋಸ್ಟ್ ಹಾಕಿದ್ದಾರೆ.
ನಿನ್ನೆ ಬೆಳಗ್ಗೆಯಿಂದ ಸಿಬಿಐ ವಶದಲ್ಲಿದ್ದ ವಿನಯ್ ಕುಲಕರ್ಣಿ ಅವರನ್ನು ಧಾರವಾಡದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ವಿನಯ್ ಕುಲಕರ್ಣಿಗೆ ಒಂದು ದಿನದ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆ ಸಿಬಿಐ ಅಧಿಕಾರಿಗಳು ಧಾರವಾಡದಿಂದ ಬೆಳಗಾವಿ ಹಿಂಡಲಗಾ ಜೈಲಿಗೆ ಕರೆತಂದಿದ್ದರು.
ಜೈಲು ಸಿಬ್ಬಂದಿಗೆ ಸಿಬಿಐ ಅಧಿಕಾರಿಗಳು ಕೋರ್ಟ್ ವಾರೆಂಟ್ ಹಾಜರುಪಡಿಸಿ, ವಿನಯ್ ಕುಲಕರ್ಣಿ ಅವರನ್ನು ಹಸ್ತಾಂತರಿಸಿದರು. ಜೈಲಿನಲ್ಲಿರುವ ಕ್ವಾರಂಟೈನ್ ಕೇಂದ್ರದ ಕೊಠಡಿಯಲ್ಲಿ ವಿನಯ್ ಕುಲಕರ್ಣಿ ನಿನ್ನೆ ರಾತ್ರಿ ಕಳೆದರು. ಇಂದು ವಿಡಿಯೋ ಕಾನ್ಫರೆನ್ಸ್ ಮುಖಾಂತರ ವಿಚಾರಣೆ ನಡೆಸುವ ಸಾಧ್ಯತೆಯಿದೆ.