ಧಾರವಾಡ: ಇನ್ನು ಮುಂದೆ ಎಲ್ಲರೂ ಒಟ್ಟಿಗೆ ಸೇರುವುದಿಲ್ಲ, ಯಾವಾಗಲೂ ಕೊನೆ ಎನ್ನುವುದು ಹಿಂದಿನದರ ಎಲ್ಲವನ್ನೂ ಮರೆಸುತ್ತದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪ್ರಶ್ನಾತೀತ ನಾಯಕ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ವಿಧಾನಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕೊನೆಯ ಭಾಷಣ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ನಾಲ್ಕು ಬಾರಿ ಸಿಎಂ ಆದವರು ಮತ್ತು ಅವರೊಬ್ಬ ಹೋರಾಟಗಾರ ಎಂದರು.
ಚುನಾವಣೆ ಬಂದಾಗ ಬೇರೆ ಏನೇ ಇರಬಹುದು, ಆದರೆ ಅಧಿವೇಶನ ನಡೆದಾಗ ಸರ್ಕಾರದ ಮೇಲೆ ಮತ್ತು ಒಬ್ಬರ ಮೇಲೆ ಒಬ್ಬರ ತಿಕ್ಕಾಟ ಇತ್ತು. ನಾನು ಕಳೆದ 6 ತಿಂಗಳಿಂದ ನೋಡಿದ್ದೇನೆ. ಅಭಿವೃದ್ಧಿ ಬಗ್ಗೆ ಯಾವ ಪಕ್ಷದವರೂ ಮಾತನಾಡಿಲ್ಲ, ಇವರು ಅವರನ್ನು ಬೈಯುವುದು, ಅವರು ಇವರನ್ನು ಬಯ್ಯೋದು ಈ ರೀತಿ ರಾಜಕಾರಣಿಗಳು ಟೀಕೆ, ಟಿಪ್ಪಣಿ ಬಿಟ್ಟು ರಾಜ್ಯದ ಅಭಿವೃದ್ಧಿಗಾಗಿ ಪ್ರಯತ್ನ ಪಡಬೇಕು ಎಂದು ಸಲಹೆ ನೀಡಿದರು.
ನಿನ್ನೆ ಅಧಿವೇಶನ ಮುಗಿದಿದೆ. ಹೋಗುವ ಮುನ್ನ ಎಲ್ಲರೂ ಹೇಗೆ ಕ್ರೀಡೆ ಮುಗಿದ ನಂತರ ಗೆದ್ದವರು ಮತ್ತು ಸೋತವರು ಹಸ್ತಲಾಘವ ಮಾಡಿಕೊಳ್ಳುತ್ತಾರೋ ಅದೇ ರೀತಿ ಎಲ್ಲ ಪಕ್ಷದ ನಾಯಕರು ಮಾಡಿದ್ದಾರೆ. ಇದು ಒಳ್ಳೆಯದು, ಇದಕ್ಕಿಂತ ಮೊದಲು ರಾಜ್ಯದ ಬಗ್ಗೆ, ಜನರ ಬಗ್ಗೆ, ಸುಧಾರಣೆ ಬಗ್ಗೆ, ವೈಯಕ್ತಿಕ ಟೀಕೆ ಬಿಟ್ಟು ಪ್ರಯತ್ನ ಮಾಡಬೇಕಿತ್ತು. ಈಗಲಾದರೂ ಎಲ್ಲರೂ ತಿಳಿದುಕೊಂಡು ಮುಂದಿನ ದಿನಗಳಲ್ಲಿ ಸರ್ಕಾರ ಬಂದಾಗ ಒಳ್ಳೆಯ ವಾತಾವರಣ ನಿರ್ಮಾಣ ಆಗಲಿ ಎಂದು ಹಾರೈಸುತ್ತೇನೆ ಎಂದರು.
ಸ್ವಾಮೀಜಿಗಳು ವಿಧಾನಸೌಧಕ್ಕೆ ಬರಬಾರದು:ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಸ್ವಾಮೀಜಿಗಳನ್ನು ರಾಜಕಾರಣಕ್ಕೆ ಕರೆದ ವಿಚಾರವಾಗಿ ಪ್ರತಿಕ್ರಿಯಿಸಿದ ಹೊರಟ್ಟಿ, ಆ ಬಗ್ಗೆ ನಾನು ಹೇಳುವುದು ಸೂಕ್ತ ಅಲ್ಲಾ, ಮೊನ್ನೆ 8 ಜನ ಸ್ವಾಮೀಜಿಗಳು ವಿಧಾನಸೌಧಕ್ಕೆ ಬಂದಿದ್ದರು. ಸ್ವಾಮೀಜಿಗಳು ವಿಧಾನಸೌಧಕ್ಕೆ ಬರಬಾರದು. ಸ್ವಾಮಿಗಳು ಮಠ ಬಿಟ್ಟು ಹೊರ ಬರುವುದರಿಂದ ಅವರು ಆ ಅರ್ಥದಲ್ಲಿ ಹೇಳಿರಬೇಕು. ಮಠದಲ್ಲಿ ರಾಜಕಾರಣ ಸೇರಬಾರದು ಎಂದು ಹೇಳಿದ್ದೆ. ಆದರೆ ಅದನ್ನ ಎಲ್ಲರು ಕೇಳಬೇಕಲ್ಲ ಎಂದರು.