ಧಾರವಾಡ: ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ಪ್ರಯತ್ನಕ್ಕೆ ದೊಡ್ಡ ಇತಿಹಾಸವೇ ಇದೆ. ಎಲ್ಲ ಸರ್ಕಾರಗಳು ಆ ಕೆಲಸ ಮಾಡುತ್ತಾ ಬಂದಿವೆ. ಕೇಂದ್ರ ಸರ್ಕಾರದ ಎರಡು ಆಡಳಿತ ಭಾಷೆಗಳಲ್ಲಿ ಹಿಂದಿ ಕೂಡ ಒಂದು ಅಷ್ಟೇ. ಸಂವಿಧಾನದಲ್ಲಿ ಎಲ್ಲಿಯೂ ಹಿಂದಿ ರಾಷ್ಟ್ರ ಭಾಷೆಯೆಂದು ಕರೆದಿಲ್ಲ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ಭಾಷೆಯನ್ನೂ ಸಂವಿಧಾನದಲ್ಲಿ ರಾಷ್ಟ್ರ ಭಾಷೆ ಅಂತಾ ಹೇಳಿಲ್ಲ. ಕನ್ನಡ ಒಳಗೊಂಡು ಎಲ್ಲ ಭಾಷೆಗಳೂ ರಾಷ್ಟ್ರದ ಭಾಷೆಗಳೇ. ಹಾಗೆಯೇ ಹಿಂದಿಯೂ ಕೂಡ ರಾಷ್ಟ್ರದ ಒಂದು ಭಾಷೆಯಾಗಿದೆ ಎಂದರು.
ಎಲ್ಲ ಮಾತೃಭಾಷೆಗೂ ಮೊದಲ ಮಹತ್ವ ಸಿಗಬೇಕು. ಸರ್ಕಾರಿ ಕಚೇರಿಗಳಲ್ಲಿನ ಹಿಂದಿ ಬಳಕೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಅದಕ್ಕಾಗಿಯೇ ಒಂದು ಸಮಿತಿಯೂ ಇದೆ. ಆದರೆ, ಅಲ್ಲಿ ಎಲ್ಲಾ ಭಾಷೆಗಳ ಅನುಷ್ಠಾನದ ಬಗ್ಗೆಯೂ ಪರಿಶೀಲನೆ ನಡೆಯಬೇಕು. ಸರ್ವ ಭಾಷಾ ಸಮಾನತೆ ನಮ್ಮ ನೀತಿ ಆಗಬೇಕು. ಹಿಂದಿ ಕಲಿಕೆ ಬೇರೆ, ಹಿಂದಿ ಹೇರಿಕೆ ಬೇರೆ, ನಾನು ಹಿಂದಿ ಕಲಿಕೆಗೆ ವಿರೋಧಿಯಲ್ಲ ಹಿಂದಿ ಹೇರಿಕೆಗೆ ವಿರೋಧಿ ಎಂದರು.
ಹಿಂದಿ ಬಳಕೆ ಬಗ್ಗೆ ಕೇಂದ್ರ ಸಚಿವ ಅಮಿತ್ ಷಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂದಿ ಹೇರುವ ಪ್ರಯತ್ನ ನಡೆದಾಗಲೆಲ್ಲ ಪ್ರತಿರೋಧ ಬಂದಿದೆ. ಪ್ರತಿರೋಧ ಬಂದಾಗಲೆಲ್ಲ ಹಿಂದೆ ಸರಿದಿದೆ. ಆದರೆ, ಆ ಸಮಸ್ಯೆಯನ್ನು ಜೀವಂತವಾಗಿ ಇಟ್ಟಿದ್ದಾರೆ. ಅದನ್ನು ಜೀವಂತವಾಗಿ ಇಡಬಾರದು, ಸರ್ವಭಾಷಾ ಸಮಾನತೆ ಒಕ್ಕೂಟ ಸರ್ಕಾರದ ನೀತಿ ಆಗಬೇಕೆಂದು ಹೇಳಿದರು.
ಇದನ್ನೂ ಓದಿ:ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ: ಸುದೀಪ್ ಮಾತಿಗೆ ಧ್ವನಿಗೂಡಿಸಿದ ಕನ್ನಡ ತಾರೆಯರು