ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ನಡುವಿನ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಾವಿರ ರಹದಾರಿ ಎಂದು ಕುಖ್ಯಾತಿಗಳಿಸಿತ್ತು. ಈ ರಸ್ತೆಯಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು. ಆದರೂ ಯಾರು ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಇದೀಗ ಕೊನೆಗೂ ಈ ಸಾವಿನ ಹೆದ್ದಾರಿಗೆ ಕಾಮಗಾರಿ ಭಾಗ್ಯ ಬಂದಿದೆ. ಷಟ್ಪಥ ರಸ್ತೆ ಕಾಮಗಾರಿ ಆರಂಭವಾಗಿದ್ದು, ತಾರಿಹಾಳ ಟೋಲ್‌ನಾಕಾ ಸಮೀಪದ ಮೆಟ್ರೊ ಫಿನಿಷ್ ಕಂಪನಿ ಬಳಿ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಷಟ್ಪಥ ರಸ್ತೆಗೆ ಅಗತ್ಯವಿರುವ ಜಾಗ ಸಮತಟ್ಟು ಮಾಡಲಾಗುತ್ತಿದೆ. ಗುಡ್ಡ, ಕಲ್ಲು - ಬಂಡೆಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿ ಮತ್ತು ಧಾರವಾಡ ನಡುವಿನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಕಳೆದ 13ವರ್ಷಗಳಲ್ಲಿ ಬರೋಬ್ಬರಿ 400ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. 2009ರಿಂದ ಈವರೆಗೆ 1,800ಕ್ಕೂ ಹೆಚ್ಚು ಅಪಘಾತಗಳು ನಡೆದಿದ್ದು, 350 ಗಂಭೀರ ಸ್ವರೂಪದ ಅಪಘಾತಗಳು, 950ಕ್ಕೂ ಹೆಚ್ಚು ಸಾಧಾರಣ ಅಪಘಾತಗಳು ನಡೆದಿವೆ. 1,900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ 300ಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಅಪ್ಪ-ಅಮ್ಮ, ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಇದನ್ನೂ ಓದಿ:ಯಲಹಂಕದಲ್ಲಿ ರಸ್ತೆ ಕಾಮಗಾರಿ ವಿಳಂಬ.. ಅಪಘಾತಕ್ಕೆ ಮಹಿಳಾ ಉದ್ಯೋಗಿ ಬಲಿ
ಇನ್ನೂ ಒಂದೂವರೆ ವರ್ಷದ ಹಿಂದೆಯೇ ಕೇಂದ್ರ ಸಾರಿಗೆ ಸಚಿವರು ಕಾಮಗಾರಿಗೆ ಚಾಲನೆ ನೀಡಿದ್ದರು. ತಡವಾಗಿಯೇ ಕಾಮಗಾರಿ ಆರಂಭವಾಗಿದ್ದು ಈ ಭಾಗದ ಜನರಿಗರ ಸಮಾಧಾನ ತಂದಿದೆ. ಸುಮಾರು 31 ಕಿ ಮೀ ಉದ್ದದ ಹುಬ್ಬಳ್ಳಿ- ಧಾರವಾಡ ಬೈ ಪಾಸ್ ರಸ್ತೆ ಅಗಲೀಕರಣದ ಕಾಮಗಾರಿ ಪ್ರಾರಂಭಗೊಂಡಿದ್ದು, ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಈ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಒಂದು ಮೇಲ್ಸೇತುವೆ, ಒಂದು ಚಿಕ್ಕ ಸೇತುವೆ, ವಾಹನಗಳ ಸಂಚಾರಕ್ಕಾಗಿ 13 ಅಂಡರ್ ಪಾಸ್ ಗಳು, ಲಘು ವಾಹನಗಳ ಸಂಚಾರಕ್ಕೆ 7 ಅಂಡರ್ ಪಾಸ್ ಗಳು ಹಾಗೂ ಒಂದು ರೇಲ್ವೆ ಮೇಲ್ಸ್ತುವೆ ನಿರ್ಮಾಣ ಮಾಡಲಾಗುವುದು.
ಈ ಷಟ್ಟಥ ರಸ್ತೆಯ ಎರಡು ಬದಿಗೆ ಎರಡು ಲೇನ್ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡುವುದಲ್ಲದೇ ಪ್ರತಿಯೊಂದು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವನ್ನು ಕಲ್ಪಿಸಲಾಗುವುದು ಎಂಬುವಂತ ಮಾಹಿತಿಯನ್ನು ಪ್ರಹ್ಲಾದ್ ಜೋಶಿ ಹಂಚಿಕೊಂಡಿದ್ದಾರೆ.
ನವೆಂಬರ್ನಲ್ಲಿ ನಡೆದಿತ್ತು ಸರಣಿ ಅಪಘಾತ: ಕಳೆದ ವರ್ಷ ನವೆಂಬರ್ನಲ್ಲಿ ಬೆಳಗಾವಿ ಜಿಲ್ಲೆಯ ವಂಟಮೂರಿ ಘಾಟ್ ಬಳಿಯ ಇದೇ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದು 7ಕ್ಕೂ ಅಧಿಕ ಮಂದಿ ಗಂಭಿರ ಗಾಯಗೊಂಡಿದ್ದರು. ಬೆಳಗಾವಿಯ ಪುಣೆ ಕಡೆಗೆ ಹೊರಟಿದ್ದ ಲಾರಿಯು ಡಿವೈಡರ್ಗೆ ಡಿಕ್ಕಿ ಹೊಡೆದ ಪಲ್ಟಿಯಾಗಿ ಹೆದ್ದಾರಿಯ ಮೇಲೆ ಉರುಳಿ ಬಿದ್ದಿತ್ತು. ಈ ವೇಳೆ ಬೆಳಗಾವಿ ಕಡೆಗೆ ಬರುತ್ತಿದ್ದ ಕಾರುಗಳು ಲಾರಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿತ್ತು.
ಇದನ್ನೂ ಓದಿ:ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ದುರಸ್ತಿ: ಪರ್ಯಾಯ ಮಾರ್ಗ ಅಧಿಸೂಚನೆ ಮುಂದುವರಿಕೆ