ಡಾ.ಎಸ್.ಕೆ.ವಂಟಿಗೋಡಿ ಹೇಳಿಕೆ ಧಾರವಾಡ:ಬೆಳಗಾವಿಯ ಗ್ರಾಮವೊಂದರಲ್ಲಿ ನಡೆದ ಮಹಿಳೆ ಮೇಲಿನ ದೌರ್ಜನ್ಯ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ. ಸ್ವಯಂ ಪ್ರೇರಿತ ದೂರು ದಾಖಿಸಿಕೊಳ್ಳಲಾಗಿದೆ ಎಂದು ಆಯೋಗದ ಸದಸ್ಯ ಡಾ. ಎಸ್.ಕೆ. ವಂಟಿಗೋಡಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ವರದಿ ಆಧರಿಸಿ ದೂರು ದಾಖಲಿಸಿಕೊಂಡಿದ್ದೇವೆ. ನಮ್ಮ ಆಯೋಗದ ಅಧ್ಯಕ್ಷರು ಕ್ರಮ ಜರುಗಿಸುತ್ತಾರೆ. ಕ್ರಮ ಜರುಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲಿಯೇ ಮಾನವ ಹಕ್ಕುಗಳು ಉಲ್ಲಂಘನೆಯಾದರೆ ಆಯೋಗ ದೂರು ದಾಖಲಿಸಿಕೊಳ್ಳುತ್ತದೆ. ಸಂಬಂಧಿಸಿದವರಿಂದ ವಿವರಣೆ ಸಹ ಕೇಳುತ್ತೇವೆ. ವಿವರ ಸರಿ ಇಲ್ಲದಾಗ ಸಂಬಂಧಿಸಿದ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ತಿಳಿಸಲಾಗುತ್ತದೆ ಎಂದರು.
ಕಳೆದೆರಡು ದಿನಗಳಿಂದ ತಾವು ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಧಾರವಾಡದ ವಿವಿಧ ಹಾಸ್ಟೆಲ್‍ಗಳು, ಬಂಧಿಖಾನೆ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ಹಾಗೂ ಹಕ್ಕುಗಳ ಸಂರಕ್ಷಣೆ ನಿಟ್ಟಿನಲ್ಲಿ ಆಯೋಗವು ಸದಾ ಕರ್ತವ್ಯ ನಿರತವಾಗಿದೆ. ಧಾರವಾಡದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಪರಿಶಿಷ್ಟ ಜಾತಿ, ಪಂಗಡಗಳ ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ತಾವು ಸಂವಾದ ನಡೆಸಿದ್ದು, ಉತ್ತಮ ನಿರ್ವಹಣೆ ಕಂಡು ಬಂದಿದೆಯೆಂದರು. ಆದರೆ ಹೆಚ್ಚಿನ ಕಟ್ಟಡಗಳ ಅವಶ್ಯಕತೆ ಇದ್ದು, ಅನುದಾನದ ಕೊರತೆ ಇರುವುದಾಗಿ ತಿಳಿದು ಬಂದಿತು. ಧಾರವಾಡವು ಇಡೀ ಉತ್ತರ ಕರ್ನಾಟಕಕ್ಕೆ ವಿದ್ಯಾಕೇಂದ್ರವಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಹಾಸ್ಟೆಲ್ ಕಟ್ಟಡಗಳ ಅಗತ್ಯವಿದೆ. ವಿವಿಧ ಕಾಮಗಾರಿ ನಡೆಯುತ್ತಿರುವ ಕಟ್ಟಡ ಕಾರ್ಮಿಕರೊಂದಿಗೆ ಚರ್ಚಿಸಿ, ಕಾರ್ಮಿಕರ ಹಾಗೂ ಅವರ ಮಕ್ಕಳ ಸ್ಥಿತಿಗತಿಗೆ ಸೂಕ್ತ ಸೌಲಭ್ಯಗಳನ್ನು ವಿತರಿಸುತ್ತಿರುವ ಬಗ್ಗೆಯೂ ಪರಿಶೀಲಿಸಲಾಯಿತು ಎಂದು ತಿಳಿಸಿದರು.
ಬಂಧಿಖಾನೆಯಲ್ಲಿ ಶಿಕ್ಷಾ ಬಂಧಿಗಳು ಹಾಗೂ ವಿಚಾರಣೆ ಎದುರಿಸುತ್ತಿರುವ ಬಂಧಿಗಳ ಜೊತೆ ಚರ್ಚಿಸಲಾಯಿತು. ಅಲ್ಲಿಯ ಅಡುಗೆ, ಗ್ರಂಥಾಲಯ ಶಿಕ್ಷಣ ಸೌಲಭ್ಯಗಳ ಬಗ್ಗೆ ಪರಿಶೀಲಿಸಲಾಯಿತು. ಉತ್ತಮ ನಿರ್ವಹಣೆ ಕಂಡು ಬಂದಿದೆ ಎಂದರು.
ಜಿಲ್ಲಾ ಆಸ್ಪತ್ರೆಗೆ ತೆರಳಿ ಒಳರೋಗಿಗಳ ಸ್ಥಿತಿಗತಿ, ಹೊರರೋಗಿಗಳು, ಬ್ಲಡ್ ಬ್ಯಾಂಕ್, ಲ್ಯಾಬ್ ಪರಿಶೀಲಿಸಲಾಯಿತು. ಅಲ್ಲಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಚರ್ಚಿಸಲಾಯಿತು. ಗರ್ಭಿಣಿ ಹಾಗೂ ತಾಯಂದಿರ, ಮಕ್ಕಳ ವಾರ್ಡ್ ತೀರ ಕಿಕ್ಕಿರಿದು ಕಂಡು ಬಂದಿತು. ನೂತನ ಕಟ್ಟಡಗಳ ಅಗತ್ಯವಿದೆ. ವಿಶೇಷ ವೈದ್ಯಾಧಿಕಾರಿಗಳ ಕೊರತೆಯಿದೆ. ಜಿಲ್ಲಾ ಆಸ್ಪತ್ರೆಯನ್ನು ಬೇರೆಡೆ ಸ್ಥಳಾಂತರಕ್ಕೆ ಚರ್ಚೆ ನಡೆದಿರುವ ಬಗ್ಗೆ ಶಸ್ತ್ರಚಿಕಿತ್ಸಕ ಡಾ. ಗಾಬಿ ಗಮನಕ್ಕೆ ತಂದರು. ಈ ಎಲ್ಲ ವರದಿಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದೆಂದು ವಂಟಿಗೋಡಿ ಅವರು ಮಾಹಿತಿ ನೀಡಿದರು.
ಓದಿ:ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿದ ಕೇಸ್; ಇದು ದುಶ್ಯಾಸನ ರಾಜ್ಯ, ಮಹಿಳೆಯ ನೆರವಿಗೆ ಯಾರೂ ಬಂದಿಲ್ಲ ಎಂದ ಹೈಕೋರ್ಟ್