ಹುಬ್ಬಳ್ಳಿ: ಆಪರೇಷನ್ ಕಮಲದಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಆಪರೇಷನ್ ಕಮಲ ನಡೆದೇ ಇಲ್ಲ. ಆಗದೇ ಇರುವ ಆಪರೇಷನ್ ಬಗ್ಗೆ ಡಿಕೆಶಿ ಮಾತನಾಡುತ್ತಿದ್ದಾರೆ. ಅವರ ಶಾಸಕರನ್ನು ಸಂರಕ್ಷಣೆ ಮಾಡಿದಕ್ಕೆ ರೇಡ್ ಆಗಿದೆ ಎಂಬುವುದು ಶುದ್ಧ ಸುಳ್ಳು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.
ನಗರದಲ್ಲಿಂದು ಪ್ರವಾಹ ಪೀಡಿತ ಪ್ರದೇಶಗಳ ಹಾನಿ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ನಂತರ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಈವರೆಗೆ ಎಷ್ಟು ಹಣದ ವ್ಯವಹಾರಗಳನ್ನು ಮಾಡಿದ್ದಾರೆಂಬ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡಿದ್ದಾರೆ. ನಂತರ ಪೂರ್ಣ ಪ್ರಮಾಣದ ತನಿಖೆಗಾಗಿ ಇಡಿಗೆ ಹಸ್ತಾಂತರಿಸಲಾಗಿದೆ. ಇಡಿ ವಿಚಾರಣೆ ಕುರಿತಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಿಜೆಪಿ ಮೇಲೆ ಮಾಡಿದ ಆರೋಪ ಶುದ್ಧ ಸುಳ್ಳು. ಅದರಲ್ಲಿ ಯಾವುದೇ ಹುರುಳಿಲ್ಲ. ಯಾರು ತಪ್ಪು ಮಾಡಿದ್ದಾರೆ ಅವರು ಶಿಕ್ಷೆ ಅನುಭವಿಸಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದರು.