ಹುಬ್ಬಳ್ಳಿ:ಧಾರವಾಡ ಉಸ್ತುವಾರಿಗೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ತೀವ್ರ ಪೈಪೋಟಿ ನಡೆದಿದೆ ಎನ್ನಲಾಗುತ್ತಿದೆ. ಜಿಲ್ಲೆಯಲ್ಲಿ ಸಂತೋಷ್ ಲಾಡ್ ಸಚಿವರಿದ್ದಾಗಲೂ ಲಕ್ಷ್ಮಿ ಹೆಬ್ಬಾಳ್ಕರ್ ಆಸಕ್ತಿ ವಹಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಧಾರವಾಡ ಜಿಲ್ಲೆಗೆ ಒಂದೇ ಒಂದು ಸಚಿವ ಸ್ಥಾನ ದೊರೆತಿದೆ. ತೀವ್ರ ಪೈಪೋಟಿ ನಡುವೆ ಕಲಘಟಗಿ ಶಾಸಕ ಸಂತೋಷ ಲಾಡ್ ಸಚಿವರಾಗಿದ್ದಾರೆ. ಆದರೆ, ಇದೀಗ ಜಿಲ್ಲಾ ಉಸ್ತುವಾರಿ ಸಚಿವರು ಯಾರಾಗುತ್ತಾರೆ ಎಂಬ ಕುತೂಹಲ, ಚರ್ಚೆ ಜಿಲ್ಲೆಯಲ್ಲಿ ಜೋರಾಗಿಯೇ ನಡೆದಿದೆ.
ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚು:ಸಂಪ್ರದಾಯದಂತೆ ಸಂತೋಷ ಲಾಡ್ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾಗಬೇಕು. ಆದರೆ, ಧಾರವಾಡ ಜಿಲ್ಲೆಯ ಉಸ್ತುವಾರಿ ಆಗಲು ಪ್ರಥಮ ಬಾರಿಗೆ ಸಚಿವೆಯಾಗಿರುವ ಬೆಳಗಾವಿ ಜಿಲ್ಲೆಯ ಲಕ್ಷ್ಮಿ ಹೆಬ್ಬಾಳ್ಕರ್ ಆಸಕ್ತಿ ವಹಿಸಿದ್ದಾರೆ. ಈ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದೆ.
ಒಂದು ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಧಾರವಾಡ ಜಿಲ್ಲೆ ಉಸ್ತುವಾರಿ ಸಚಿವರಾದರೇ, ಸಂತೋಷ ಲಾಡ್ ಪಕ್ಕದ ಹಾವೇರಿ ಜಿಲ್ಲೆಯಲ್ಲಿ ಯಾರು ಸಚಿವರಿಲ್ಲದ ಕಾರಣ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಸಂತೋಷ ಲಾಡ್ ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಯ ಉಸ್ತುವಾರಿ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಕೊಡುವುದಾದರೆ ಧಾರವಾಡ ಜಿಲ್ಲೆಯ ಉಸ್ತುವಾರಿಯನ್ನೇ ನೀಡಬೇಕು ಎನ್ನುವ ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಿದೆ.