ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಚುರುಕಿನಿಂದ ಸಾಗಿದೆ.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ: 146 ಮತಗಟ್ಟೆಗಳಲ್ಲಿ ಮತದಾನ ಉತ್ತರ ಕನ್ನಡ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳನ್ನು ಒಳಗೊಂಡ ಕ್ಷೇತ್ರದ ನಾಲ್ಕು ಜಿಲ್ಲೆಯ 146 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. 4 ಜಿಲ್ಲೆಯಿಂದ 74,268 ಮತದಾರರಿದ್ದು, ಬೆಳಗ್ಗೆಯಿಂದ ಮತದಾನ ಆರಂಭಗೊಂಡಿದೆ. ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯಿಂದ ಎಸ್.ವಿ.ಸಂಕನೂರ, ಕಾಂಗ್ರೆಸ್ನಿಂದ ಆರ್.ಎಂ.ಕುಬೇರಪ್ಪ ಸೇರಿದಂತೆ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಧಾರವಾಡ ನಗರ-178, ಧಾರವಾಡ ಗ್ರಾಮೀಣ-50, ಗದಗ-201, ಹಾವೇರಿ-170 ಹಾಗೂ ಉತ್ತರ ಕನ್ನಡ -157 ಸೇರಿದಂತೆ ಒಟ್ಟು 756 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಕೋವಿಡ್-19 ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸಲು ಅಗತ್ಯ ಸಿಬ್ಬಂದಿ, ಆರೋಗ್ಯ ಪರಿಕರಗಳನ್ನು ನೀಡಲಾಗಿದೆ.
ಮತದಾನದ ಕೊನೆಯ ಒಂದು ಗಂಟೆ ಕೊರೊನಾ ಶಂಕಿತ, ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ಅವಕಾಶ ನೀಡಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಐಸೋಲೇಷನ್ ರೂಂ ವ್ಯವಸ್ಥೆ ಮಾಡಲಾಗಿದೆ. ಮತದಾನಕ್ಕೆ ಬರುವ ಪ್ರತಿಯೊಬ್ಬ ಮತದಾರನಿಗೆ ಮಾಸ್ಕ್ ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಪಾಲಿಸಲು ಸೂಚಿಸಲಾಗಿದ್ದು, ಥರ್ಮಲ್ ಸ್ಕ್ರೀನಿಂಗ್ ಸಹ ಮಾಡಲಾಗುತ್ತಿದೆ.