ಧಾರವಾಡ:ಕೊರೊನಾ ಎರಡನೇ ಅಲೆ ನಿಯಂತ್ರಸಲು ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ಧಾರವಾಡದಲ್ಲಿ ಬೀದಿಗಳು ಖಾಲಿ ಹೊಡೆಯುತ್ತಿವೆ.
ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಉಳಿದಂತೆ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಅಗತ್ಯ ವಸ್ತುಗಳನ್ನು ಖರೀದಿಸಿ ಜನರು ಮನೆಯತ್ತ ಮುಖ ಮಾಡಿದ್ದಾರೆ.
ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿದ್ದಾರೆ. ಅನಗತ್ಯವಾಗಿ ಓಡಾಡುವ ಜನರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಮದುವೆ ಕಾರ್ಯಕ್ರಮಗಳಿಗೆ ನಿರ್ದಿಷ್ಟ ಜನರಿಗೆ ಮಾತ್ರ ಅವಕಾಶ ನೀಡಿದೆ.
ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆ ಧಾರ್ಮಿಕ ಕೇಂದ್ರಗಳಿಗೆ ಸರ್ಕಾರ ಕಠಿಣ ನಿಯಮ ಜಾರಿಗೊಳಿಸಿದೆ. ಆ ಕಾರಣ ದೇವಸ್ಥಾನಗಳು ಸಹ ಭಕ್ತರಿಲ್ಲದೇ ಖಾಲಿಖಾಲಿಯಾಗಿವೆ. ಧಾರವಾಡ ಪ್ರಸಿದ್ದ ನುಗ್ಗಿಕೇರಿ ಹನುಮಂತ ದೇವರ ದೇವಸ್ಥಾನ ಪ್ರತಿ ಶನಿವಾರ ಭಕ್ತರಿಂದ ತುಂಬಿ ತುಳಕುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಅರ್ಚಕರಿಗೆ ಮಾತ್ರ ಪೂಜೆ ಮಾಡಲು ಅವಕಾಶ ನೀಡಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಿದ ಕಾರಣ ದೇವಾಲಯಗಳು ಸಹ ಬಿಕೋ ಎನ್ನುತ್ತಿವೆ.
ಹುಬ್ಬಳ್ಳಿಯಲ್ಲೂ ವೀಕೆಂಡ್ ಎಫೆಕ್ಟ್: ಕೊರೊನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬೆಳ್ಳಂಬೆಳಗ್ಗೆ ಹುಬ್ಬಳ್ಳಿ ಬಹುತೇಕ ಸ್ತಬ್ಧವಾಗಿದ್ದು, ಜನರು ಮನೆಯಲ್ಲಿಯೇ ಇದ್ದು ವೀಕೆಂಡ್ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದಾರೆ.
ಜನರ ಅನುಕೂಲತೆಗೆ ಅನುಗುಣವಾಗಿ ಸಿಟಿ ಬಸ್ ಹಾಗೂ ಆಟೋ ಕಾರ್ಯಚರಣೆ ನಡೆಸಿದ್ದು, ಜನರು ಅಗತ್ಯ ಕೆಲಸ ಇದ್ದರೇ ಮಾತ್ರ ಓಡಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ವಾಣಿಜ್ಯನಗರಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತ, ಜನತಾ ಬಜಾರ್, ಕೊಪ್ಪಿಕರ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ಬಹುತೇಕ ಕಡೆಗಳಲ್ಲಿ ಜನ ಸಂಚಾರ ಸ್ತಬ್ಧವಾಗಿದೆ.