ಪಂಚರಾಜ್ಯ ಚುನಾವಣೆಯಲ್ಲಿ ನಾವು ಮೂರು ಕಡೆ ಗೆಲ್ಲುತ್ತೇವೆ ಧಾರವಾಡ : ಪಂಚರಾಜ್ಯ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಧಾರವಾಡದಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ನಮ್ಮ ಗುರಿ ಎಲ್ಲ ರಾಜ್ಯ ಗೆಲ್ಲುವುದಿದೆ. ಆದರೇ, ನಾವು ಮೂರು ಕಡೆ ಗೆಲ್ಲುತ್ತೇವೆ. ಮಿಜೋರಾಂದಲ್ಲಿ ಎನ್‌ಡಿಎ ಸರ್ಕಾರ ಬರುತ್ತದೆ. ತೆಲಂಗಾಣದಲ್ಲಿ ಮೂರು ಪಕ್ಷಗಳ ಮಧ್ಯೆ ಫೈಟ್ ಇದೆ ಎಂದು ಹೇಳಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿನ ಕಚ್ಚಾಟದಿಂದ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ನಮ್ಮ ಕಾಲದಲ್ಲಿ ಮಂಜೂರಾದ ರಸ್ತೆ ಕಾಮಗಾರಿಗಳನ್ನು ತಡೆ ಹಿಡಿದಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ನಾವು ಐದು ಕೆಜಿ ಅಕ್ಕಿ ಕೊಡುತ್ತಿದ್ದೇವೆ ನಿಮ್ಮ ಹತ್ತು ಕೆಜಿ ಅಕ್ಕಿ ಯಾವಾಗ ಕೊಡ್ತೀರಿ? ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವರು ಪ್ರಶ್ನಿಸಿದರು. ಪ್ರಧಾನಿಗಳ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ಆಗಿದೆ. ಸಭೆಯಲ್ಲಿ ಪಡಿತರ ಅಕ್ಕಿ ವಿತರಣೆ ಬಗ್ಗೆ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ. 80 ಕೋಟಿ ಜನರಿಗೆ ತಲಾ ಐದು ಕೆಜಿ ಅಕ್ಕಿ ಕೊಡುವ ತೀರ್ಮಾನ ಮಾಡಲಾಗಿದೆ. ಕರ್ನಾಟಕದಲ್ಲಿ ಸುಮಾರು ಆರೂವರೆ ಕೋಟಿ ಜನಸಂಖ್ಯೆ ಇದೆ. ಅದರಲ್ಲಿ ಶೇ. 50ರಷ್ಟು ಜನರಿಗೆ ಲಾಭ ಸಿಗಲಿದೆ ಎಂದರು.
ನ್ಯಾನ್ಯೋ ಯುರಿಯೂ ಔಷಧ ಸಿಂಪಡಣೆಗೆ ಯೋಜನೆ ಮಾಡಿದ್ದೇನೆ. ಶೇ. 35ರ ಸಬ್ಸಿಡಿಯಲ್ಲಿ ಸ್ವಸಹಾಯ ಸಂಘಗಳಿಗೆ ಸಾಲ ಕೊಡಲಾಗುವುದು. ಸ್ವ ಸಹಾಯ ಸಂಘದ ಮಹಿಳೆಯರಿಗೆ ಔಷಧಿ ಸಿಂಪಡಣೆ ತರಬೇತಿ ನೀಡಲಿದ್ದೇವೆ. ಇದಕ್ಕಾಗಿ ಡ್ರೋನ್ ತರಬೇತಿ ನೀಡಿತ್ತಿದ್ದೇವೆ. ದೇಶದ 15 ಸಾವಿರ ಸ್ವಸಹಾಯ ಗುಂಪುಗಳು ಇದರಡಿ ಬರಲಿದ್ದು, ಅವರನ್ನು ನಮೋ ಡ್ರೋನ್ ಸಹೋದರಿ ಅಂತಾ ಪರಿಚಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿಯೇ ಅನೇಕ ರಸ್ತೆ ಕಾಮಗಾರಿಗಳು ನಿಂತಿವೆ. ನಾವು ಸಿಎಂ, ಡಿಸಿಎಂ ಪಿಡಬ್ಲುಡಿ ಸಚಿವರಿಗೆ ಒತ್ತಾಯ ಮಾಡಿದ್ದೇವೆ. ಒತ್ತಡ ಹಾಕಿದ ಮೇಲೆ ಹಳೆಯ ಕೆಲ ಕಾಮಗಾರಿಗಳನ್ನು ಆರಂಭಿಸಿದ್ದಾರೆ. ಆದರೆ, ಅದನ್ನು ನಾವೇ ಮಾಡಿಸಿದ್ದು ಅಂತಾ ಕೆಲವರು ಬೋರ್ಡ್ ಹಾಕಿಕೊಂಡಿದ್ದಾರೆ. ರಸ್ತೆಗಳು ಬಹಳ ಕೆಟ್ಟಿವೆ ರಸ್ತೆಗಳನ್ನು ಮಾಡಿ ನಿಮ್ಮ ಆಂತರಿಕ ಕಚ್ಚಾಟ ನಿಲ್ಲಿಸಿ ಒಬ್ಬ ವ್ಯಕ್ತಿಯನ್ನು ಸಂರಕ್ಷಿಸುವುದಕ್ಕೆ ಇಡೀ ಕಾನೂನನ್ನು ರಾಜ್ಯ ಸರ್ಕಾರ ಕೈಗೆ ತೆಗೆದುಕೊಂಡಿದೆ ಇದು ಅತ್ಯಂತ ಖಂಡನೀಯ ಎಂದು ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳನ್ನು ವೋಟಿಗಾಗಿ ಮಾಡಿದ್ದಾರೆ. ಯಾವ ಯೋಜನೆ ಸಹ ಸರಿಯಾಗಿ ಕೊಟ್ಟಿಲ್ಲ. ಎಲ್ಲರಿಗೂ ಉಚಿತ ವಿದ್ಯುತ್ ಎಂದಿದ್ದರು. ಆದರೆ 200 ಯುನಿಟ್ ಕೊಡಲಿಲ್ಲ, ಟ್ರಾನ್ಸಫಾರ್ಮರ್ ಹಾಕಲು ಶುಲ್ಕನಿಗದಿ ಮಾಡಿದ್ದಾರೆ. ವಿದ್ಯುತ್ ದರ ಏರಿಸಿದ್ದಾರೆ. ಈ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಬಹುದು ಎಂದಿದ್ದಾರೆ. ಆದರೆ, ಜನ ಇದರ ಬಗ್ಗೆ ತಿಳಿದುಕೊಂಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅಂತಾರೆ. ಆದರೆ ಬಸ್ ಸಂಖ್ಯೆ ಕಡಿಮೆ ಮಾಡಿದ್ದಾರೆ. ವಿದ್ಯುತ್ ಲೋಡ್ ಶೆಡ್ಡಿಂಗ್ ಶುರು ಮಾಡಿದ್ದಾರೆ. ನಮ್ಮ ದೇಶದಲ್ಲಿ ಕಲ್ಲಿದ್ದಲು, ವಿದ್ಯುತ್ ಲಭ್ಯ ಇದೆ. ಆದರೆ ಇವರು ವಿದ್ಯುತ್ ಉತ್ಪಾದನೆ ಮಾಡುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಜೋಶಿ ಹರಿಹಾಯ್ದರು.
ರಾಯಚೂರು ಥರ್ಮಲ್ ಯುನಿಟ್‌ದಿಂದ ಕಲ್ಲಿದ್ದಲ್ಲು ಕಳ್ಳತನ ಆಗಿದೆ. ಇದರ ಅರಿವು ನಿಮಗೆ ಇಲ್ಲವಾ? ವಿದ್ಯುತ್ ಉತ್ಪಾದನೆಯನ್ನೇ ಕಡಿಮೆ ಮಾಡಿದ್ದಾರೆ. ಗೃಹಲಕ್ಷ್ಮೀಯಲ್ಲಿ ಸುಮ್ಮನೆ ತೊಂದರೆ ಕೊಡುತ್ತಿದ್ದಾರೆ. ಯುವನಿಧಿ ಅಂತಾ ಹೇಳಿದ್ದಾರೆ. ಅದು ಎಲ್ಲಿಯೋ ನಾಪತ್ತೆ ಆಗಿದೆ. ಕರೆಂಟ್ ಫ್ರೀ ಎನ್ನುತ್ತ ಜನರನ್ನು ಕರೆಂಟ್‌ನಿಂದಲೇ ಫ್ರೀ ಮಾಡಿದ್ದಾರೆ. ಆಡಳಿತ ಯಂತ್ರ ಕುಸಿದಿದ್ದು, ಜಿಲ್ಲಾ ಮಂತ್ರಿಗಳು ತಮ್ಮ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ :ಪಂಚರಾಜ್ಯ ಚುನಾವಣೆಯಲ್ಲಿ ಕನಿಷ್ಠ ಮೂರು ಕಡೆ ಅಧಿಕಾರ ಹಿಡಿಯುತ್ತೇವೆ : ಸಚಿವ ಎಂ ಬಿ ಪಾಟೀಲ್