ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಧಾರವಾಡ:ಬಿಜೆಪಿ ಈ ಸಲ ಮ್ಯಾಜಿಕ್ ನಂಬರ್ ಕ್ರಾಸ್ ಮಾಡಲಿದೆ. ಸರಳ ಬಹುಮತಕ್ಕಿಂತ 15 ಸ್ಥಾನ ಹೆಚ್ಚೇ ಪಡೆಯುತ್ತೇವೆ ಎಂದು ಜಿಲ್ಲೆಯ ನವಲಗುಂದದಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಶೀಘ್ರವೇ ರಾಜ್ಯದಲ್ಲಿ ನರೇಂದ್ರ ಮೋದಿಯವರ ರ್ಯಾಲಿ ಆರಂಭ ಆಗಲಿವೆ. ಅಮಿತ್ ಶಾ ಸಹ ಬರಲಿದ್ದಾರೆ. ಏಪ್ರಿಲ್ 21ರಂದು ರ್ಯಾಲಿ ಎಲ್ಲೆಲ್ಲಿ ಎನ್ನುವುದು ಅಂತಿಮವಾಗಲಿದೆ. ಬುಧವಾರ ಜೆ.ಪಿ.ನಡ್ಡಾ ರಾಜ್ಯಕ್ಕೆ ಆಗಮಿಸುವರುರೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿ, "ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಲಿದ್ದಾರೆ. ಅದೇ ವೇಳೆ ಹುಬ್ಬಳ್ಳಿಯಲ್ಲಿ ಎರಡು ಕಾರ್ಯಕ್ರಮ ಆಗಲಿವೆ. ಜಗದೀಶ ಶೆಟ್ಟರ್ ಪಕ್ಷ ಬಿಟ್ಟು ಹೋಗಬಾರದಿತ್ತು, ಹೋಗಿದ್ದಾರೆ. ಪಕ್ಷ ಬಲಪಡಿಸಲು ನಾವು ಎಲ್ಲರೂ ಒಗ್ಗಟ್ಟಾಗಿ ಇರಲಿದ್ದೇವೆ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆ:ಇಂದುನವಲಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ನಾಮಪತ್ರ ಸಲ್ಲಿಸಿದರು. ನವಲಗುಂದದ ಗಣಪತಿ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಮೂಲಕ ಆಗಮಿಸಿದ ಸಚಿವ ಮುನೇನಕೊಪ್ಪ ಅಪಾರ ಅಭಿಮಾನಿಗಳು, ಕಾರ್ಯಕರ್ತರೊಂದಿಗೆ ತಹಶೀಲ್ದಾರ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಶೆಟ್ಟರ್ ಭಾವಚಿತ್ರ ಅಳಿಸಿದ ಕಾರ್ಯಕರ್ತರು:ಜಗದೀಶ್ ಶೆಟ್ಟರ್ ಫೋಟೋ ಇರುವ ಟಿ-ಶರ್ಟ್ಗೆ ಕಾರ್ಯಕರ್ತನೋರ್ವ ಇಂಕ್ ಬಳಿಯುವ ಮೂಲಕ ಭಾವಚಿತ್ರ ಅಳಿಸಿದರು. ಇನ್ನೋರ್ವ ಕಾರ್ಯಕರ್ತ ಟಿ-ಶರ್ಟ್ ಮೇಲಿದ್ದ ಶೆಟ್ಟರ್ ಭಾವಚಿತ್ರಕ್ಕೆ ಮಸಿ ಬಳಿದರು. ಈ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಮುನೇನಕೊಪ್ಪಗೆ ಸಾಥ್ ನೀಡಿದ ಪ್ರದೀಪ್ ಶೆಟ್ಟರ್:ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಸಹೋದರ ಪ್ರದೀಪ್ ಶೆಟ್ಟರ್ ಅವರು ಶಂಕರ ಪಾಟೀಲ ಮುನೇಕೊಪ್ಪ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಜೊತೆಯಾದರು.
ಸ್ವಾರ್ಥಕ್ಕಾಗಿ ಬಿಜೆಪಿ ತ್ಯಜಿಸಿದ್ದಾರೆ- ಬಸನಗೌಡ ಪಾಟೀಲ್: ಈ ದೇಶಕ್ಕೆ ನರೇಂದ್ರ ಮೋದಿ ಬೇಕಾಗಿದೆ. ರಾಜ್ಯಕ್ಕೆ ಬಿಜೆಪಿ ಸರ್ಕಾರ ಬೇಕಿದೆ. ಯಾರೇ ಹೋಗಲಿ ಬಿಜೆಪಿಗೆ ಬಹುಮತ ಬರುವುದು ಗ್ಯಾರಂಟಿ. ಹೊಸ ಬಿಜೆಪಿ ನಾಯಕತ್ವ ಬರುವುದಿದೆ. ಲಿಂಗಾಯತರಲ್ಲಿ ಸಾಕಷ್ಟು ನಾಯಕರಿಗೆ ಅನ್ಯಾಯ ಆಗಿದೆ ಅಂತಾರೆ. ಎಂಎಲ್‌ಎ, ಮಂತ್ರಿ, ಸಿಎಂ, ಸ್ಪೀಕರ್, ಡಿಸಿಎಂ ಆಗಿ ಎಲ್ಲ ಸುಖಗಳನ್ನು ಉಂಡಿದ್ದಾರೆ. ದುಡಿಯಲಾರದೆ, ದುಃಖ ಪಡಲಾರದೆ ಸುಖ ಅನುಭವಿಸಿದ್ದಾರೆ. ಹೋಗುವವು ಹೋಗಿವೆ, ಈಗ ಎಲ್ಲವೂ ನಮ್ಮ ಕೈಯಲ್ಲಿ ಬರುವುದಿದೆ. ಪ್ರಹ್ಲಾದ್ ಜೋಶಿ, ಬಿ.ಎಲ್.ಸಂತೋಷ್ ಯಾರೂ ಸಿಎಂ ಆಗುವುದಿಲ್ಲ ಮತ್ತೆ ಲಿಂಗಾಯತರೇ ಸಿಎಂ ಆಗುತ್ತಾರೆ ಎಂದರು.
'ಬೀಗರೆಲ್ಲ ಒಂದೇ ಪಕ್ಷ ಸೇರಿದ್ದಾರೆ': ಜೋಶಿ ಅವರು ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. ನಾನು ಸಿಎಂ ರೇಸ್‌ನಲ್ಲಿದ್ದೇನೆ ಎಂದು ಹೇಳಲಾರೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷದವರೇ ಸಿಎಂ ಆಗುತ್ತಾರೆ. ಈಗ ಎಲ್ಲ ಬೀಗರು ಒಂದೇ ಪಕ್ಷದಲ್ಲಿ ಇದ್ದಾರೆ. ಶೆಟ್ಟರ್, ಶಾಮನೂರ, ಎಂ.ಬಿ.ಪಾಟೀಲ್ ಎಲ್ಲರೂ ಬೀಗರು. ಇವರೆಲ್ಲ ಒಂದೇ ಪಕ್ಷದಲ್ಲಿದ್ದಾರೆ. ಇಷ್ಟು ದಿನ ಬೀಗರು ಬೇರೆ ಬೇರೆ ಪಕ್ಷದಲ್ಲಿದ್ದರು. ಆಗ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು. ಈಗ ಒಂದೆಡೆ ಸೇರಿದ್ದಾರೆ ಎಂದು ವ್ಯಂಗ್ಯವಾಡಿದರು.